ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ಚೌಡೇಶ್ವರಿ ಅಗ್ನಿಕುಂಡ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದ ವೇಳೆ, ಹಳೆಯ ಮನೆಯೊಂದರ ಸಜ್ಜಾ ಕುಸಿದು ಬಿದ್ದ ಪರಿಣಾಮ 10 ಮಂದಿ ಗಾಯಗೊಂಡಿದ್ದಾರೆ.
ಉಜ್ಜನಿ ಚೌಡೇಶ್ವರಿ ದೇವಿ ಉತ್ಸವದಲ್ಲಿ ಅತೀ ದೊಡ್ಡ ಅಗ್ನಿಕೊಂಡ ಹಾಯುವುದನ್ನು ನೋಡಲು ಸಾವಿರಾರು ಮಂದಿ ಭಕ್ತರು ಜಮಾಯಿಸಿದ್ದರು. ದೇವಸ್ಥಾನದ ಅಕ್ಕ ಪಕ್ಕದ ಕಟ್ಟಡಗಳ ಮೇಲೆ ನಿಂತು ಜನ ಕಾರ್ಯಕ್ರಮ ನೋಡುತ್ತಿದ್ದರು. ಈ ವೇಳೆ ಹಳೆಯ ಕಟ್ಟಡದ ಮೇಲೆ ಜನ ಜಂಗುಳಿ ಜಮಾಯಿಸಿತ್ತು. ಸಜ್ಜಾ ಮೇಲೆ ಜನದಟ್ಟಣೆ ಹೆಚ್ಚಿದ್ದರಿಂದ ಅದು ಇದ್ದಕ್ಕಿದ್ದಂತೆ ಕುಸಿದಿದೆ. ಇದರಿಂದಾಗಿ ಕೆಲವರು ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ತೀವ್ರವಾಗಿ ಗಾಯಗೊಂಡವರನ್ನು ಮಂಡ್ಯ ಹಾಗೂ ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡಿರುವ ರಕ್ಷಿತಾ, ರಂಜಿತಾ, ದಾಸಪ್ಪ, ನಾಗೇಶ್ ಕುಮಾರ್, ನಿಖಿಲ್, ಬೋರಯ್ಯ ಹಾಗೂ ಲಕ್ಷ್ಮಮ್ಮ ಎಂಬುವರನ್ನ ಕುಣಿಗಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
