ಶಿವಮೊಗ್ಗ: ಸಾಧನೆ ಮಾಡಬೇಕೆಂಬ ಛಲವೊಂದಿದ್ದರೆ ಗುರಿಯ ಹಾದಿ ಸುಲಭ ಎನ್ನುವುದನ್ನು ಜಿಲ್ಲೆಯ ಅವಳಿ ಸಹೋದರಿಯರು ಸಾಬೀತು ಮಾಡಿದ್ದಾರೆ.
ಹೌದು, ಸಾಗರ ತಾಲೂಕು ಲಾವಿಗ್ಗೆರೆ ಗ್ರಾಮದ ಮಮತ ಹಾಗೂ ಮಧು ತಮ್ಮ ಸಾಧನೆ ಮೂಲಕ ಗಮನ ಸೆಳೆದ ಅವಳಿ ಸಹೋದರಿಯರು. ಇಬ್ಬರು ಸಹ ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಲಾವಿಗ್ಗೆರೆ ಗ್ರಾಮದ ಲಿಂಗಪ್ಪ ಹಾಗೂ ಭಾಗ್ಯಮ್ಮ ದಂಪತಿಯ ನಾಲ್ಕು ಮಕ್ಕಳಲ್ಲಿ ಮಮತ ಹಾಗೂ ಮಧು ಅವಳಿ ಸಹೋದರಿಯರು. ತಂದೆ ಮೃತಪಟ್ಟು 13 ವರ್ಷಗಳು ಕಳೆದಿವೆ. ತಮ್ಮ ನಾಲ್ಕು ಜನ ಮಕ್ಕಳನ್ನು ಭಾಗ್ಯಮ್ಮ ಕಷ್ಟಪಟ್ಟು ಬೆಳೆಸಿದ್ದಾರೆ. ಇದರಲ್ಲಿ ಮೊದಲೇ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿರುವ ಭಾಗ್ಯಮ್ಮ, ಅವಳಿ ಸಹೋದರಿಯರಾದ ಮಮತ ಹಾಗೂ ಮಧುರನ್ನು ಕಷ್ಟ ಪಟ್ಟು ಓದಿಸಿ, ಅವರಿಗೆ ಪಿಎಸ್ಐ ತರಬೇತಿ ಕೊಡಿಸಿದ್ದರು.
ಇದರಲ್ಲಿ ಮಧು 2019 ರಲ್ಲಿ ಪಿಎಸ್ಐ ಆಗಿ ಆಯ್ಕೆಯಾಗಿ, ಸದ್ಯ ಮೈಸೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ವರ್ಷ ಮಮತ ಅವರು ಪಿಎಸ್ಐ ಆಗಿ ಆಯ್ಕೆಯಾಗಿದ್ದು, ಇವರು ಸಹ ತರಬೇತಿಗೆ ತೆರಳುತ್ತಿದ್ದಾರೆ. ಅವಳಿ ಸಹೋದರಿಯರು ತಮ್ಮ ಗುರಿಯನ್ನು ಸಾಧಿಸಿ, ಗ್ರಾಮೀಣ ಭಾಗದ ಯುವತಿಯರು ಸಹ ಮನಸ್ಸು ಮಾಡಿದರೆ ಯಾವ ಹುದ್ದೆಯನ್ನಾದರೂ ಪಡೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ತಂದೆ ಮೃತಪಟ್ಟ ನಂತರ ಇವರ ಅಕ್ಕ ಹಾಗೂ ಭಾವ ಇವರ ಬೆನ್ನಿಗೆ ನಿಂತು ಈ ಹುದ್ದೆಗೆ ಏರಲು ಸಹಾಯ ಮಾಡಿದ್ದಾರೆ. ಗುರಿಯನ್ನಿಟ್ಟುಕೊಂಡು ಸಾಗಿದರೆ ಯಶಸ್ಸು ಸಿಗುತ್ತದೆ ಎನ್ನುತ್ತಾರೆ ಸಾಧಕಿ ಮಮತ.
ಅದೇ ರೀತಿ ಮಕ್ಕಳ ಸಾಧನೆಯನ್ನು ಕಂಡು ತಾಯಿ ಸಂತೋಷ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಅವಳಿ ಸಹೋದರಿಯರ ಈ ಸಾಧನೆ ಹಿಂದೆ ತಾಯಿ ಭಾಗ್ಯಮ್ಮ ಅವರ ಶ್ರಮ ಮತ್ತು ಪ್ರೋತ್ಸಾಹ ಶ್ಲಾಘನೀಯ.