ಶಿವಮೊಗ್ಗ: ಕುಡಿಯುವ ನೀರು ಕೇಳಲು ಬಂದ ಅಪರಿಚಿತರಿಬ್ಬರು ಮನೆಗೆ ನುಗ್ಗಿ ಯುವತಿಯ ಕಿವಿ ಓಲೆ ಹಾಗೂ 15 ಸಾವಿರ ರೂ. ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಶಿವಮೊಗ್ಗದ ಅರವಿಂದ ನಗರದಲ್ಲಿ ನಡೆದಿದೆ.
ಹೆಲ್ಮೆಟ್ ಧರಿಸಿದ್ದ ಅಪರಿಚಿತರಿಬ್ಬರು ಅರವಿಂದ ನಗರದ ಶಂಕರರಾವ್ ಎಂಬುವರ ಮನೆಗೆ ಬಂದಿದ್ದಾರೆ. ಈ ವೇಳೆ ಶಂಕರರಾವ್ ಅವರ ಪುತ್ರಿ ಶುಭ ಮಾತ್ರ ಮನೆಯಲ್ಲಿ ಇದ್ದಾರೆ. ಇದನ್ನು ಗಮನಿಸಿದ ಇಬ್ಬರು ನೀರು ಕೇಳಿದ್ದಾರೆ. ಶುಭ ನೀರು ತರಲು ಒಳಗೆ ಹೋಗುತ್ತಿದ್ದಂತೆಯೇ ಅವರ ಕತ್ತು ಹಿಡಿದಿದ್ದಾರೆ. ಇದರಿಂದ ಶುಭ ಕುತ್ತಿಗೆ ಭಾಗದಲ್ಲಿ ಸ್ವಲ್ಪ ಗಾಯವಾಗಿದೆ. ಈ ವೇಳೆ ಅಪರಿಚಿತರಿಬ್ಬರು ಶುಭ ಕಿವಿಯಲ್ಲಿ ಇದ್ದ ಓಲೆ, ಮನೆಯಲ್ಲಿದ್ದ 15 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಈ ವೇಳೆಗೆ ಶುಭ ಕರೆ ಮಾಡಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮನೆಗೆ ಬಂದ ತಂದೆ ಶುಭರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಗಳು ಕರೆಂಟ್ ಶಾಕ್ನಿಂದ ಪ್ರಜ್ಞೆ ತಪ್ಪಿ ಬಿದ್ದಿರಬಹುದು ಎಂದು ನಂಜಪ್ಪ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಪ್ರಜ್ಞೆ ಬಂದ ನಂತರ ಶುಭ, ಅಪರಿಚಿತರು ಮನೆಗೆ ಬಂದು ಹಲ್ಲೆ ನಡೆಸಿದ ವಿಚಾರ ತಿಳಿಸಿದ್ದಾರೆ.
ಈ ಸಂಬಂಧ ಶಂಕರರಾವ್ ಅವರು ಮಗಳು ಶುಭ ಜೊತೆ ವಿನೋಬನಗರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ.