ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮ ದಿನವನ್ನು ಜಿಲ್ಲೆಯಲ್ಲಿ ಈ ಬಾರಿ ವಿಶೇಷವಾಗಿ ಆಚರಿಸಲಾಗುತ್ತಿದೆ.
ನಮ್ಮೊಲುಮೆ ಎಂಬ ವಿಭಿನ್ನ ಕಾರ್ಯಕ್ರಮವನ್ನು ನಗರದ ಹಳೇ ಜೈಲು ಆವರಣದಲ್ಲಿ ಆಯೋಜಿಸಲಾಗಿದ್ದು, ಗಾಯಕ ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಅವರ ತಂಡದವರು ನಾಳೆ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರ ಜೀವನಾಧಾರಿತ ಹಾಡಿಗೆ ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಹಾಡನ್ನು ಪ್ರಸ್ತುತಪಡಿಸಲಿದ್ದಾರೆ.
ಈ ಕುರಿತು ಗಾಯಕ ವಿಜಯ್ ಪ್ರಕಾಶ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಸಿಎಂ ಯಡಿಯೂರಪ್ಪನವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಾಳೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಡಿಯೂರಪ್ಪ ಅವರು ಕಲಾವಿದರಿಗೆ ನೀಡುವ ಗೌರವ, ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಈ ಹಿಂದೆ ಶಿಕಾರಿಪುರದಲ್ಲಿ ಕಾರ್ಯಕ್ರಮ ನಡೆದಾಗ ಯಡಿಯೂರಪ್ಪನವರು ಜೊತೆಗೆ ಊಟಕ್ಕೆ ಕರೆದೊಯ್ದಿದ್ದರು. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಬಾರಿಯೂ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇವೆ ಎಂದು ತಿಳಿಸಿದರು.
ಬಳಿಕ ಗಾಯಕ ರಾಜೇಶ್ ಕೃಷ್ಣನ್ ಮಾತನಾಡಿ, ನಾಳೆ ಪ್ರೀತಿಯೊಂದಿಗೆ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದೇವೆ. ನಾಳಿನ ಶೋ ಎನರ್ಜಿಯ ಶೋ ಆಗಲಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಬಿಎಸ್ವೈ ಕೊಡುಗೆ ಸ್ಮರಿಸುವ ಕಾರ್ಯಕ್ರಮ:
ಶಿವಮೊಗ್ಗ ಜಿಲ್ಲೆಗೆ ಯಡಿಯೂರಪ್ಪನವರು ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮದಲ್ಲಿ 25 ಸಾವಿರ ಮಾಸ್ಕ್ ಹಾಗೂ ಕಾರ್ಯಕ್ರಮಕ್ಕೆ ಬಂದವರಿಗೆ ಲಾಡು ವಿತರಿಸಲಾಗುವುದು ಎಂದು ನಮ್ಮೂಲುಮೆ ಕಾರ್ಯಕ್ರಮದ ರೂವಾರಿ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡರು ತಿಳಿಸಿದ್ದಾರೆ.