ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಆರ್.ಎಂ.ಮಂಜುನಾಥ್ ಗೌಡ ಅವಿರೋಧ ಆಯ್ಕೆಯಾಗಿದ್ದಾರೆ.
ಇಂದು ಕೇಂದ್ರ ಬ್ಯಾಂಕ್ನಲ್ಲಿ ಉಪವಿಭಾಗಧಿಕಾರಿ ಪ್ರಕಾಶ್ರವರ ಸಮ್ಮುಖದಲ್ಲಿ ಅಧ್ಯಕ್ಷರ ಚುನಾವಣೆ ನಡೆಸಲಾಯಿತು. ಅಧ್ಯಕ್ಷರ ಚುನಾವಣೆಗೆ ಒಂದೇ ಒಂದು ನಾಮಪತ್ರ ಸಲ್ಲಿಕೆಯಾದ ಕಾರಣ ಆರ್.ಎಂ.ಮಂಜುನಾಥ್ ಗೌಡರನ್ನು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಘೋಷಣೆ ಮಾಡಲಾಯಿತು.
ಡಿಸಿಸಿ ಬ್ಯಾಂಕ್ನಲ್ಲಿ ಒಟ್ಟು 15 ಸ್ಥಾನಗಳಿವೆ. ಇದರಲ್ಲಿ ಮೈತ್ರಿ ಬೆಂಬಲಿತರು 9 ನಿರ್ದೇಶಕರು ಹಾಗೂ ಬಿಜೆಪಿ ಬೆಂಬಲಿತರು 4 ನಿರ್ದೇಶಕರಿದ್ದಾರೆ. ಸರ್ಕಾರದ ಇಬ್ಬರು ಪ್ರತಿನಿಧಿಗಳು ಇದ್ದಾರೆ.
ನಡೆಯದ ಉಪಾಧ್ಯಕ್ಷರ ಚುನಾವಣೆ
ಡಿಸಿಸಿ ಬ್ಯಾಂಕ್ನಲ್ಲಿ ಪ್ರತೀ ಬಾರಿಯೂ ಅಧ್ಯಕ್ಷರ ಚುನಾವಣೆಯ ಜೊತೆಗೆ ಉಪಾಧ್ಯಕ್ಷರ ಚುನಾವಣೆ ಸಹ ನಡೆಯುತ್ತದೆ. ಆದ್ರೆ, ಈ ಬಾರಿ ಉಪಾಧ್ಯಕ್ಷರ ಚುನಾವಣೆ ನಡೆಯಲಿಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಮೈತ್ರಿ ಕಡೆಯಿಂದ ಷಡಕ್ಷರಿ ಹಾಗೂ ಬಿಜೆಪಿ ಕಡೆಯಿಂದ ಅಗಡಿ ಅಶೋಕ್ ನಾಮಪತ್ರ ಸಲ್ಲಿಸಿದ್ದರು. ಕಳೆದ ಹದಿನೈದು ವರ್ಷಗಳಿಂದ ಬ್ಯಾಂಕ್ನಲ್ಲಿ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಅಯ್ಕೆ ನಡೆದುಕೊಂಡು ಬಂದಿದೆ. ಆದ್ರೆ ಕೊನೆ ಗಳಿಗೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲಿಕೆಯಾದ ಎರಡು ನಾಮಪತ್ರಗಳು ವಾಪಸ್ ಪಡೆದ ಕಾರಣ ಚುನಾವಣೆ ನಡೆಯಲಿಲ್ಲ. ಇನ್ನೊಂದು ವಾರದಲ್ಲಿ ಚುನಾವಣೆ ನಡೆಸಲಾಗುತ್ತದೆ.
10ನೇ ಬಾರಿ ಆರ್.ಎಂ.ಮಂಜುನಾಥ್ ಗೌಡ ಅವಿರೋಧ ಆಯ್ಕೆ
ಬ್ಯಾಂಕ್ನ ಅಧ್ಯಕ್ಷರಾಗಿ ಆರ್.ಎಂ.ಮಂಜುನಾಥ್ ಗೌಡರವರು ಸತತ ಹತ್ತನೇ ಬಾರಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಬ್ಯಾಂಕ್ನ ಇತಿಹಾಸದಲ್ಲಿ ದಾಖಲೆಯಾಗಿದೆ. ಅಧ್ಯಕ್ಷರಾಗಿ ಆಯ್ಕೆಯಾಗುತ್ತಲೇ ಮಂಜುನಾಥ್ ಗೌಡರ ಅಭಿಮಾನಿಗಳು ಹಾರ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿದರು. ಬ್ಯಾಂಕ್ ನ ಸರ್ವತೋಖ ಅಭಿವೃದ್ದಿ ಹಾಗೂ ದಾಖಲೆಯ ಸಾಲ ಸೌಲಭ್ಯ ನೀಡಿದ ಪರಿಣಾಮ ಮತ್ತೊಮ್ಮೆ ಅಧ್ಯಕ್ಷರಾಗಿ ನಿರ್ದೇಶಕರು ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ನಿಂದ ರೈತರಿಗೆ ಇನ್ನಷ್ಟು ಸಾಲ ಸೌಲಭ್ಯಗಳನ್ನು ನೀಡಲಾಗುವುದು, ಅವರಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.