ಶಿವಮೊಗ್ಗ: ತೀರ್ಥಹಳ್ಳಿ ವಿಧಾನಸಭೆ ರಾಜ್ಯದ ಸುಸಂಸ್ಕೃತರ ಕ್ಷೇತ್ರಗಳಲ್ಲಿ ಒಂದು. ಜೊತೆಗೆ ರಾಜ್ಯದ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ಕೂಡ ಹೌದು. ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬಿಳುವ ಪ್ರದೇಶ ಸಹ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿದೆ. ಇಂತಹ ವಿಧಾನಸಭಾ ಕ್ಷೇತ್ರ ಕಲೆ, ಸಾಹಿತ್ಯ, ಸಂಗೀತದ ಜೊತೆಗೆ ರಾಜಕೀಯಕ್ಕೂ ಪ್ರಸಿದ್ಧಿ ಪಡೆದಿದೆ. ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿ ಕುವೆಂಪು ಹಾಗೂ ಸಾಹಿತಿ ಯು.ಆರ್ ಅನಂತಮೂರ್ತಿ ಅವರ ತವರೂರು ಕೂಡ ಇದೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕಡಿದಾಳು ಮಂಜಪ್ಪನವರಿಂದ ಈ ಕ್ಷೇತ್ರ ರಾಜಕೀಯಕ್ಕೂ ಪ್ರಸಿದ್ಧಿ ಪಡೆದಿದೆ. ಕಲೆ ಸಾಹಿತ್ಯ, ಸಂಗೀತ, ರಾಜಕೀಯದ ಜೊತೆಗೆ ಪ್ರಾಕೃತಿಕ ಶ್ರೀಮಂತಿಕೆ ಇಲ್ಲಿಯ ಹಿರಿಮೆಗೆ ಮತ್ತೊಂದು ಸಾಕ್ಷಿ. ಇಂತಹ ಹಲವು ವೈಶಿಷ್ಠ್ಯವನ್ನು ಹೊಂದಿರುವ ತೀರ್ಥಹಳ್ಳಿ ಕ್ಷೇತ್ರದಲ್ಲಿ ಈಗ ಜಿದ್ದಾಜಿದ್ದಿನ ಚುನಾವಣೆ ನಡೆಯುತ್ತಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಬಿಜೆಪಿಯಿಂದ ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಕಾಂಗ್ರೆಸ್ನಿಂದ ಕಿಮ್ಮನೆ ರತ್ನಾಕರ್ ಹಾಗೂ ಜೆಡಿಎಸ್ನಿಂದ ರಾಜರಾಮ್ ಹಗಡೆ, ಆಮ್ ಆದ್ಮಿ ಪಕ್ಷದಿಂದ ಸಾಲೂರು ಶಿವಕುಮಾರ ಗೌಡ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿಯಿಂದ ಅರುಣ್ ಕನ್ನಹಳ್ಳಿ ಸೇರಿ ಒಟ್ಟು ಐದು ಜನ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಎಲ್ಲರು ತಮ್ಮ ತಮ್ಮ ಕಾರ್ಯಕರ್ತರ ಜೊತೆ ಭರ್ಜರಿ ಪ್ರಚಾರದಲ್ಲಿ ತೂಡಗಿಕೊಂಡಿದ್ದಾರೆ. ಈ ಹಿಂದೆ ಸ್ಪರ್ಧೆ ಮಾಡಿದ್ದ ಶಾಂತವೇರಿ ಗೋಪಾಲಗೌಡರಿಗೆ ಇಲ್ಲಿನ ಜನ ಒಂದು ನೋಟು, ಒಂದು ಓಟು ಎಂದು ಗೆಲ್ಲಿಸಿ ಕಳುಹಿಸಿಕೊಟ್ಟಿದ್ದು ಈ ಕ್ಷೇತ್ರದ ಮತ್ತೊಂದು ವೈಶಿಷ್ಟ್ಯ.
ಒಂದೇ ಪಕ್ಷದಿಂದ 10ನೇ ಭಾರಿ ಸ್ಪರ್ಧೆ ಮಾಡಿರುವ ಆರಗ ಜ್ಞಾನೇಂದ್ರ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು 10ನೇ ಬಾರಿ ಒಂದೇ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ. ಇದು ರಾಜ್ಯದಲ್ಲಿಯೇ ವಿಶೇಷ ಎನ್ನಬಹುದು. ರಾಜ್ಯ ರಾಜಕೀಯದಲ್ಲಿ ಒಂದೇ ಪಕ್ಷದಿಂದ ಸ್ಪರ್ಧೆ ಮಾಡಿದ ಬೆರಳಿಕೆಯ ರಾಜಕೀಯ ನಾಯಕರಲ್ಲಿ ಆರಗ ಜ್ಞಾನೇಂದ್ರ ಒಬ್ಬರಾಗಿದ್ದಾರೆ.
ಆರಗ ಜ್ಞಾನೇಂದ್ರ ಮೊದಲ ಭಾರಿಗೆ ಬಿಜೆಪಿಯಿಂದ 1983 ರಲ್ಲಿ ಸ್ಪರ್ಧೆ ಮಾಡಿದ್ದರು. ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮಕಾಲಿನರಾಗಿ ಆರಗ ಜ್ಞಾನೇಂದ್ರ ಸ್ಪರ್ಧೆ ಮಾಡಿದ್ದರು. 1983 ರಿಂದ 1994ರ ತನಕ ಸತತ ಮೂರು ಭಾರಿ ಸೋಲನ್ನು ಅನುಭವಿಸಿದ್ದರು. ನಂತರ 1994ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ವಿಧಾನಸಭೆ ಪ್ರವೇಶ ಮಾಡುತ್ತಾರೆ. ಪ್ರಭಾವಿ ರಾಜಕಾರಣಿ, ಮಂತ್ರಿಯೂ ಆಗಿದ್ದ ಡಿ.ಬಿ.ಚಂದ್ರೆಗೌಡರನ್ನು 2,952 ಮತಗಳಿಂದ ಸೋಲಿಸಿದ್ದು ಆರಗ ಜ್ಞಾನೇಂದ್ರ ವರ್ಚಸ್ಸಿಗೆ ಹಿಡಿದ ಕೈಗನ್ನಡಿ. 1994, 1999 ಹಾಗೂ 2004ರ ತನಕ ಸತತ ಮೂರು ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಕೂಡ ತಮ್ಮದಾಗಿಸಿಕೊಂಡರು. ಜೊತೆಗೆ, ಒಮ್ಮೆ ಗೆದ್ದವರು ಮತ್ತೊಮ್ಮೆ ಗೆಲ್ಲುವುದಿಲ್ಲ ಎಂಬ ತೀರ್ಥಹಳ್ಳಿ ಕ್ಷೇತ್ರದ ನಂಬಿಕೆಯನ್ನು ಕೂಡ ಪುಡಿಗಟ್ಟಿ ದಾಖಲೆ ಕೂಡ ಬರೆದರು. ಎರಡು ಭಾರಿ ಸೋತಿದ್ದ ಕಿಮ್ಮನೆ ರತ್ನಾಕರ್, 2008ರ ಚುನಾವಣೆಯಲ್ಲಿ ಮೊದಲ ಬಾರಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶ ಮಾಡಿದರು. ಇದೇ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಮತ್ತೆ ಗೆದ್ದು ಗೃಹ ಸಚಿವರು ಆದರು.
ಆರಗ ಮೂಲತಃ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾಳು. ಸತತ ಮೂರು ಬಾರಿ ಸೋತಿರುವ ಆರಗ ಪಕ್ಷದ ಸೂಚನೆಯ ಮೇರೆಗೆ ಇದೀಗ ಮತ್ತೆ ಕಣದಲ್ಲಿದ್ದಾರೆ. ಇದುವರೆಗೂ ಒಟ್ಟು 9 ಬಾರಿ ಕಣಕ್ಕಿಳಿದ ಈ ಸ್ವಯಂ ಸೇವಕ ಸಂಘದ ಕಟ್ಟಾಳು, ನಾಲ್ಕು ಬಾರಿ ಗೆದ್ದಿದ್ದು ಐದು ಬಾರಿ ಸೋಲನ್ನು ಅನುಭವಿಸಿದ್ದಾರೆ. ಎಲ್ಲಿ ಕಳೆದುಕೊಂಡಿದ್ದೇವೋ ಅಲ್ಲಿಯೇ ಹುಡುಕಬೇಕೆಂಬ ನಿರ್ಧಾರದಿಂದ ಪೈಪೋಟಿಗಿಳಿದಿದ್ದಾರೆ. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಆರಗ ಜ್ಞಾನೇಂದ್ರ ಭದ್ರಾವತಿ ಮೈಸೂರು ಪೇಪರ್ ಮಿಲ್ ಹಾಗೂ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2020 ರಲ್ಲಿ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಅಡಕೆ ಟಾಸ್ಕ್ ಪೊರ್ಸ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಭಾರಿ 10ನೇ ಬಾರಿ ಸ್ಪರ್ಧೆಗಿಳಿದಿದ್ದು ಮತ್ತೆ ಗೆಲುವಿನ ಮೂಲಕ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ.
ಕಿಮ್ಮನೆ ರತ್ನಾಕರ್: ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿಯ ಕಾಂಗ್ರೆಸ್ ಅಭ್ಯರ್ಥಿ, ಇವರು ಮೂಲತಃ ಕೃಷಿಕ ಕುಟುಂಬದವರು. ಇವರು ವಕೀಲ ವೃತ್ತಿಯಲ್ಲಿ ತಮ್ಮನ್ನು ತೂಡಗಿಸಿಕೊಂಡಿದ್ದರು. ನಂತರ ತಾಲೂಕು ಬೋರ್ಡ್ ಮೂಲಕ ತಮ್ಮ ರಾಜಕೀಯ ಪಯಣವನ್ನು ಪ್ರಾರಂಭಿಸಿದರು. ಇವರು ಜೆಡಿಎಸ್ನಿಂದ 1999 ರಲ್ಲಿ ಮೊದಲ ಭಾರಿ ಸ್ಪರ್ಧೆ ಮಾಡಿದ್ದರು. ಆಗ ಸೋಲು ಕಂಡಿದ್ದರು. 2004ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ವಿಧಾನಸಭೆಗೆ ಸ್ಲರ್ಧೆ ಮಾಡಿದರು. ಆಗ ಸೋತರು. ಮೂರು ಭಾರಿ ಶಾಸಕರಾಗಿದ್ದ ಆರಗ ಜ್ಞಾನೇಂದ್ರ ಅವರನ್ನು 2009ರಲ್ಲಿ 3,826 ಮತಗಳ ಅಂತರದಿಂದ ಸೊಲಿಸಿ ವಿಧಾನಸಭೆ ಪ್ರವೇಶ ಮಾಡಿದ್ದರು. 2013ರಲ್ಲಿ ಎರಡನೆ ಬಾರಿ ಗೆದ್ದು ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಮೂರು ವರ್ಷ ಸೇವ ಸಲ್ಲಿಸಿದರು. ಇವರ ಅವಧಿಯಲ್ಲಿ ನಂದಿತಾ ಎಂಬ ಬಾಲಿಕಿಯ ಅನುಮಾಸ್ಪದ ಸಾವು ರಾಜಕೀಯ ತಿರುವು ಪಡೆದಿದ್ದರಿಂದ 2018ರ ಚುನಾವಣೆಯಲ್ಲಿ ಕಿಮ್ಮನೆ ರತ್ನಾಕರ್ ಸೋಲನ್ನು ಅನುಭವಿಸಬೇಕಾಯಿತು. ಆದರೆ, ತಮ್ಮ ಅವಧಿಯಲ್ಲಿ ಒಂದು ದಿನವೂ ಕಲಾಪಕ್ಕೆ ಗೈರಾಗದ ಕೀರ್ತಿಗೆ ರತ್ನಾಕರ್ ಭಾಜನರಾಗಿದ್ದಾರೆ. ರಾಜ್ಯದಲ್ಲಿ ಪ್ರಮಾಣಿಕ, ಸಜ್ಜನ ರಾಜಕಾರಣಿಯಾಗಿ ಹೆಸರು ಪಡೆದುಕೊಂಡರುವ ಕಿಮ್ಮನೆ ರತ್ನಾಕರ್ ಅವರು 6ನೇ ಭಾರಿ ಸ್ಪರ್ಧೆ ಮಾಡಿದ್ದಾರೆ.
ಇಬ್ಬರ ಬಲಾಬಲ: ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಬಲಿಷ್ಟ ರಾಜಕಾರಣಿಯಾಗಿದ್ದಾರೆ. ಇವರು 10ನೇ ಬಾರಿ ಸ್ಪರ್ಧೆ ಮಾಡಿರುವುದರಿಂದ ಕ್ಷೇತ್ರದ ಪ್ರತಿ ಭಾಗವು ಇವರಿಗೆ ತಿಳಿದಿದೆ. ತೀರ್ಥಹಳ್ಳಿ ಕ್ಷೇತ್ರ ಅತಿ ದೊಡ್ಡ ಕ್ಷೇತ್ರವಾಗಿದ್ದರೂ ಅದೇ ರೀತಿ ದೊಡ್ಡ ಕಾರ್ಯಕರ್ತರ ಪಡೆ ಹೊಂದಿದೆ. ನಾಲ್ಕು ಬಾರಿ ಶಾಸಕರಾಗಿರುವ ಇವರು, ಕ್ಷೇತ್ರದಲ್ಲಿನ ಅಭಿವೃದ್ಧಿಯಿಂದ ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ಗೃಹ ಸಚಿವರಾಗಿ ಹೆಸರು ಮಾಡಿದ್ದಾರೆ. ಈ ಎಲ್ಲವೂ ಸಹ ಇವರ ಗೆಲುವಿಗೆ ಕಾರಣವಾಗಬಹುದು. ಕೊನೆಯ ಚುನಾವಣೆ ಎಂಬ ಅನುಕಂಪ ಕೆಲಸ ಮಾಡಬಹುದು ಎನ್ನಲಾಗಿದೆ.
ಕಿಮ್ಮನೆ ರತ್ನಾಕರ್ ಅವರು ಸರಳ ಸಜ್ಜನ ರಾಜಕಾರಣಿ. ಇವರು ರಾಜಕೀಯದಲ್ಲಿ ಶುದ್ಧ ಹಸ್ತರು ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ. ಇವರು ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡರ ಆದರ್ಶವನ್ನು ಮೈಗೂಡಿಸಿಕೊಂಡು ಬಂದವರು. ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮನೋಭಾವನ್ನು ಹೊಂದಿದ್ದಾರೆ. ಕಿಮ್ಮನೆ ರತ್ನಾಕರ್ ಮಹಾತ್ಮ ಗಾಂಧಿ ಸೇರಿದಂತೆ ಪ್ರಪಂಚದ ಅನೇಕ ದಾರ್ಶನಿಕರ ಕಥನಗಳನ್ನು ಓದಿ ರಾಜಕೀಯ ನಡೆಸುತ್ತಿದ್ದಾರೆ. ಇವರಿಗೂ ಕಾಂಗ್ರೆಸ್ ಕಾರ್ಯಕರ್ತರ ಪಡೆ ಇದೆ. ಎರಡು ಭಾರಿ ಪ್ರತಿಸ್ಪರ್ಧಿಯಾಗಿದ್ದ ಮಂಜುನಾಥ ಗೌಡ ಅವರು ಈಗ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ, ಕಿಮ್ಮನೆ ರತ್ನಾಕರ್ ಅವರ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಇದು ಕಿಮ್ಮನೆ ರತ್ನಾಕರ್ ಅವರ ಗೆಲುವಿಗೆ ಕಾರಣವಾಗಬಹುದಾ ಎಂಬುದನ್ನು ಫಲಿತಾಂಶದ ವರೆಗೂ ಕಾದು ನೋಡಬೇಕಿದೆ. ಒಟ್ಟಾರೆ ತೀರ್ಥಹಳ್ಳಿ ಕ್ಷೇತ್ರ ಈ ಭಾರಿ ಜಿದ್ದಾ ಜಿದ್ದಿನ ಪೈಪೋಟಿಯಲ್ಲಿದೆ.
ಇದನ್ನೂ ಓದಿ: ಸಮಾಜದಲ್ಲಿ ಗಲಭೆ ಉಂಟು ಮಾಡುವ ಉದ್ದೇಶದಿಂದ ಬಜರಂಗದಳ ನಿಷೇಧಿಸುವ ಉದ್ದೇಶ: ಸಿಎಂ ಬೊಮ್ಮಾಯಿ