ಶಿವಮೊಗ್ಗ : ತುಮಕೂರು-ಶಿವಮೊಗ್ಗ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ 6,397.47 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಅನುಮೋದನೆ ನೀಡಿರುವುದರಿಂದ ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಯೋಜನೆಯಿಂದಾಗಿ ತುಮಕೂರು-ಶಿವಮೊಗ್ಗ ನಡುವೆ 5 ದೊಡ್ಡ ಸೇತುವೆಗಳು, 66 ರೈಲ್ವೆ ಕೆಳ ಸೇತುವೆ, ಮೇಲ್ಸೇತುವೆಗಳು, 7 ಕಡೆ ಬೈಪಾಸ್ ನಿರ್ಮಾಣವಾಗಲಿದೆ. ಬೆಂಗಳೂರಿನಿಂದ ಮಲೆನಾಡು ಭಾಗದ ಸಂಪರ್ಕ ಇನ್ನಷ್ಟು ಸುಗಮವಾಗುವುದರ ಜೊತೆಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಯಾಣಕ್ಕೆ ಸಹಕಾರಿಯಾಗಲಿದೆ ಎಂದರು.
ಭಾರತ್ ಮಾಲಾ ಯೋಜನೆಯಡಿ ಅನುದಾನ : ಇತ್ತೀಚೆಗೆ ಕೇಂದ್ರ ಸಚಿವರನ್ನು ಭೇಟಿಯಾಗಿ ಯೋಜನೆಗೆ ಈಗಾಗಲೇ ನೀಡಲಾಗಿರುವ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಭೂ ಸ್ವಾಧೀನ ಹಾಗೂ ಇತರ ವೆಚ್ಚಗಳಿಗಾಗಿ 1,796.24 ಕೋಟಿ ರೂ. ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆ ಕೇಂದ್ರ ಸಚಿವರು ಭಾರತ್ ಮಾಲಾ ಯೋಜನೆಯಡಿ ಒಟ್ಟಾರೆ ಯೋಜನೆ ಅನುಷ್ಠಾನಕ್ಕೆ 6,397.47 ಕೋಟಿ ರೂ. ಮಂಜೂರು ಮಾಡಿರುವುದಕ್ಕೆ ಸಂಸದರು ಅಭಿನಂದನೆ ಸಲ್ಲಿಸಿದ್ದಾರೆ.
ಹೆದ್ದಾರಿಗಳ ನಿರ್ಮಾಣದಿಂದ ದೇಶದ ಅಭಿವೃದ್ಧಿಗೆ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಯೋಜನೆಗೆ ಅನುಮೋದನೆ ನೀಡಲು ಸಹಕರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರದಿಂದ ಪರಿಷ್ಕೃತ ಅಂದಾಜಿಗೆ ಅನುಮೋದನೆ ದೊರಕಿಸಿಕೊಟ್ಟ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಹಾಗೂ ಈಶ್ವರಪ್ಪನವರಿಗೆ, ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಅಗತ್ಯ ಪ್ರಸ್ತಾವನೆ ಸಲ್ಲಿಸುವಲ್ಲಿ ಸಹಕರಿಸಿದ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿಯವರಿಗೆ, ರಾಜ್ಯದ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸಹ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಸಿಎಂ ತವರು ಜಿಲ್ಲೆಗೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಭೇಟಿ: ಮಹತ್ವದ ಸಭೆ