ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ತನ್ನ ದೂರಶಿಕ್ಷಣವನ್ನು ಮುಂದುವರೆಸಲು ಅನುಮತಿ ದೊರಕಿಸಿಕೊಡಬೇಕೆಂದು ವಿವಿ ನಿಯೋಗ ಮಾಡಿಕೊಂಡ ಮನವಿಗೆ ಸಂಸದ ಬಿ. ವೈ. ರಾಘವೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ನಿಯೋಗದ ಮನವಿಗೆ ಸ್ಪಂದಿಸಿದ ಸಂಸದ ಬಿ.ವೈ. ರಾಘವೇಂದ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ, ಈ ವಿಷಯವನ್ನು ಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರ ಬಳಿ ಚರ್ಚಿಸಿ ಸಕಾರಾತ್ಮಕ ನಿರ್ಧಾರ ತಳೆಯಲು ಯತ್ನಿಸುವುದಾಗಿ ಭರವಸೆ ನೀಡಿದರು.
ಕುವೆಂಪು ವಿವಿಯ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ನೇತೃತ್ವದಲ್ಲಿ ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾದ ನಿಯೋಗವು ವಿವಿಯ ದೂರಶಿಕ್ಷಣವು ಸಾವಿರಾರು ಉನ್ನತ ಶಿಕ್ಷಣದ ಆಕಾಂಕ್ಷಿಗಳಿಗೆ ಭರವಸೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ದೂರಶಿಕ್ಷಣದ ಮೂಲಕ ನಡೆಸುತ್ತಿರುವ ಕೋರ್ಸ್ಗಳಿಗೆ ಅನುಮತಿ ರದ್ದುಗೊಳಿಸಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮಾತ್ರ ದೂರಶಿಕ್ಷಣ ನೀಡಲು ಅವಕಾಶ ಕಲ್ಪಿಸುವುದಾಗಿ ಕೈಗೊಂಡಿರುವ ನಿರ್ಧಾರವನ್ನು ಹಿಂಪಡೆದು ವಿವಿಗೆ ದೂರಶಿಕ್ಷಣ ಮುಂದುವರಿಸಲು ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿತು.
ದೂರಶಿಕ್ಷಣ ಕೋರ್ಸ್ಗಳ ನಿಯಂತ್ರಣಕ್ಕಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಅನುಷ್ಠಾನಗೊಳಿಸಿರುವ ಎಲ್ಲ ಮಾರ್ಗಸೂಚಿ ಮತ್ತು ಮಾನದಂಡಗಳನ್ನು ಕುವೆಂಪು ವಿಶ್ವವಿದ್ಯಾಲಯ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದು, 2019-20 ರವರೆಗೂ ಯಾವುದೇ ತಡೆಗಳಿಲ್ಲದೇ ಯುಜಿಸಿಯ ಮಾನ್ಯತೆ ಮುಂದುವರೆದುಕೊಂಡು ಬಂದಿದೆ ಎಂಬುದನ್ನು ಈ ಸಂದರ್ಭದಲ್ಲಿ ಮನವರಿಕೆ ಮಾಡಿಕೊಡಲಾಯಿತು.
ಈ ವೇಳೆ, ವಿವಿಯ ನಿಯೋಗದಲ್ಲಿ ಕುಲಸಚಿವ ಪ್ರೊ. ಎಸ್. ಎಸ್. ಪಾಟೀಲ್, ಪರೀಕ್ಷಾಂಗ ಕುಲಸಚಿವ ಪ್ರೊ. ವೆಂಕಟೇಶ್ವರುಲು, ವಿವಿ ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ. ಜೆ. ನಾರಾಯಣ್, ಸಿಂಡಿಕೇಟ್ ಸದಸ್ಯರಾದ ಬಳ್ಳೇಕೆರೆ ಸಂತೋಷ್, ಎಚ್ ಬಿ ರಮೇಶ್ ಬಾಬು, ಧರ್ಮಪ್ರಸಾದ್, ರಾಮಲಿಂಗಪ್ಪ, ಎಸ್. ಆರ್. ನಾಗರಾಜ್, ಡಾ. ಕಿರಣ್ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.