ಶಿವಮೊಗ್ಗ: ಮದ್ಯ ಸೇವಿಸಿ ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ಕಂಡ ಗ್ರಾಮಸ್ಥರು ಕೊರೊನಾ ವೈರಸ್ ಭಯದಿಂದ ಗ್ರಾಮಕ್ಕೆ ಯಾರು ಬರಬಾರದೆಂದು ಹೇಳಿ ಕಳಿಸಿದ್ದಕ್ಕೆ ಆ ವ್ಯಕ್ತಿ ಗುಂಪು ಕರೆದುಕೊಂಡು ಬಂದು ಚಾಕು ಇರಿದು ಹಲ್ಲೆ ಮಾಡಿರುವ ಪ್ರಕರಣ ಸಾಗರ ತಾಲೂಕಿನ ಮಂಕಳಲೆ ಗ್ರಾಮದಲ್ಲಿ ನಡೆದಿದೆ.
ಸಾಗರ ಪಟ್ಟಣದ ಜನ್ನತ್ ಗಲ್ಲಿಯ ಸಮೀರ್ ಎಂಬಾತ ಗ್ರಾಮದಲ್ಲಿ ಕುಡಿದು, ಗಾಂಜಾ ಸೇವನೆ ಮಾಡುತ್ತಿದ್ದ. ಆಗ ಗ್ರಾಮಸ್ಥರು ಕೊರೊನಾ ಹಿನ್ನಲೆಯಲ್ಲಿ ಯಾರು ಗ್ರಾಮಕ್ಕೆ ಬರಬಾರದು ಹಾಗೂ ಹೊರ ಹೋಗಬಾರದು ಎಂದು ಆ ವ್ಯಕ್ತಿಯನ್ನು ವಾಪಸ್ ಕಳುಹಿಸಿ ಗ್ರಾಮಕ್ಕೆ ಬೇಲಿ ಹಾಕಲು ಮುಂದಾಗಿದ್ದರು. ಅಗ ಅಲ್ಲಿಂದ ವಾಪಸ್ ತೆರಳಿದ ಸಮೀರ್ 15 ಜನರ ಗುಂಪಿನೊಂದಿಗೆ ಆಗಮಿಸಿ ಬೇಲಿ ಹಾಕುತ್ತಿದ್ದವರ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅಲ್ಲಿದ್ದ ಅಶೋಕ್ ಹಾಗೂ ಹರೀಶ್ ಎಂಬುವರು ಗಾಯಗೊಂಡಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಮೀರ್ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.