ಶಿವಮೊಗ್ಗ: ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ಶಿವಮೊಗ್ಗ ತನ್ನದೇ ಆದ ಸ್ಥಾನ ಪಡೆದಿದೆ. ಅದರಂತೆ ಮಲೆನಾಡು ಜಿಲ್ಲೆಯ ರೈತರ ಹೋರಿ ಹಬ್ಬಕ್ಕೂ ಜಿಲ್ಲೆ ಹೆಸರುವಾಸಿಯಾಗಿದೆ.
ಈ ಹೋರಿ ಹಬ್ಬದಲ್ಲಿ ನಲಿವು, ನೋವು, ಸಂತೋಷ ಎಲ್ಲವೂ ಇರುತ್ತೆ. ಶಿವಮೊಗ್ಗ ಸೇರಿದಂತೆ ಹಾವೇರಿ, ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೋರಿ ಹಬ್ಬ, ತನ್ನದೇ ಆದ ವಿಶೇಷ ಜಾನಪದ ಕ್ರೀಡೆಯಾಗಿ ಸ್ಥಾನ ಪಡೆದಿದೆ.
ಹೋರಿ ಹಬ್ಬದಲ್ಲಿ ಭಾಗವಹಿಸುವ ಹೋರಿಗೆ ಲಕ್ಷಾಂತರ ಜನ ಅಭಿಮಾನಿಗಳು ಇರ್ತಾರೆ. ಅದರಂತೆ ಕಂಸ ಎನ್ನುವ ಹೋರಿಗೂ ಸಾವಿರಾರು ಜನ ಅಭಿಮಾನಿಗಳು ಇದ್ದರು. ಸೊರಬ ತಾಲೂಕಿನ ಎಳವಳ್ಳಿಯ ಈ ಹೋರಿ, ಅಕಾಲಿಕ ಮರಣವನ್ನಪ್ಪಿದ್ದು, ಸಾವಿರಾರು ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ.
ಈ ಕಂಸನನ್ನು ಏಳು ವರ್ಷದ ಹಿಂದೆ ನವೀನ್ ಹರಾಜಿನಲ್ಲಿ ಒಂದೂವರೆ ಲಕ್ಷ ಕೊಟ್ಟು ತಂದಿದ್ದರು. ನಂತರ ಅನೇಕ ಹಬ್ಬಗಳಲ್ಲಿ ತನ್ನ ವಿಶಿಷ್ಟ ಓಟದ ಮೂಲಕ ಸಾವಿರಾರು ಅಭಿಮಾನಿಗಳನ್ನ ಗಳಿಸಿದ್ದ ಕಂಸ, ಮೂರು ದಿನದ ಹಿಂದೆ ಕಾಣಿಸಿಕೊಂಡ ಜ್ವರದಿಂದಾಗಿ ಅಕಾಲಿಕ ಮರಣ ಹೊಂದಿದ್ದಾನೆ.
ಇದರಿಂದ ಮಗನ ರೀತಿಯಲ್ಲಿ ಸಾಕಿದ್ದ ಮಾಲೀಕನಿಗೂ ಹಾಗೂ ಊರಿನ ಮಂದಿಗೂ ಊಹಿಸಿಕೊಳ್ಳಲಾಗದ ನೋವು ಉಂಟಾಗಿದೆ. ಹಾಗಾಗಿ ಕಂಸನನ್ನು ಟ್ರಾಕ್ಟರ್ ಮೂಲಕ ಮೆರವಣಿಗೆ ಮಾಡಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಈ ಹೋರಿ ತನ್ನ ವಿಶಿಷ್ಟ ಓಟದ ಮೂಲಕ ಸಾವಿರಾರು ಅಭಿಮಾನಿಗಳನ್ನ ಗಳಿಸುವ ಮೂಲಕ, ಅನೇಕ ಕಡೆಗಳಲ್ಲಿ ಬಹುಮಾನ ಪಡೆದಿತ್ತು. ಆದರೆ ಇಂದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದು, ಭಗವಂತ ಕಂಸನ ಆತ್ಮಕ್ಕೆ ಶಾಂತಿ ನೀಡಲಿ.