ಶಿವಮೊಗ್ಗ: ಜಿಲ್ಲಾ ಪಂಚಾಯತಿ ಸಿಇಒ ವೈಶಾಲಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೈಶಾಲಿ ಅವರು ಜಿಲ್ಲಾ ಪಂಚಾಯತಿ ಸಿಇಒ ಆಗಿ ಬಂದ ದಿನದಿಂದ ಇಲ್ಲಿಯವರೆಗೆ ನರೇಗಾ ಯೋಜನೆಯಲ್ಲಿ ಅನೇಕ ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರ ನಡೆದಿದೆ. ಜಿಲ್ಲಾ ಪಂಚಾಯತಿ ಇಂಜಿನಿಯರ್ಗಳಿಂದ ಪರ್ಸೆಂಟೇಜ್ ಲೆಕ್ಕದಲ್ಲಿ ಸಿಇಒ ಕೆಲಸ ಮಾಡಿಸುತ್ತಿದ್ದಾರೆ. ಹೀಗಾಗಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು, ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಂ.ಪಂ.ವ್ಯಾಪ್ತಿಯ ಕಲ್ಲೂರು ಗ್ರಾಮದ ಕೋಡಿಹಳ್ಳದ ದಂಡೆಬಲಪಡಿಸುವ ಐದು ಲಕ್ಷ ರೂ. ವೆಚ್ಚದ ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. 5 ಲಕ್ಷ ವೆಚ್ಚದ ಕಾಮಗಾರಿಗೆ ಕೇವಲ 1 ಲಕ್ಷ ರೂ. ಹಣ ಪಾವತಿಸಲಾಗಿದೆ ಹಾಗೂ ನರೇಗಾ ಕಾಮಗಾರಿಯಲ್ಲಿ ಯಂತ್ರಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಸುಳ್ಳು ಲೆಕ್ಕ ನೀಡಿ, ಸರ್ಕಾರದ ಹಣವನ್ನು ದೂರುಪಯೋಗ ಪಡೆಸಿಕೊಂಡ ಇಂಜಿನಿಯರ್ ವಿನಯ್ ಕುಮಾರ್ ಅವರನ್ನು ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.