ಶಿವಮೊಗ್ಗ: ಚೀಟಿ ಹೆಸರಿನಲ್ಲಿ ಬಿಸಿ ಊಟ ತಯಾರಕರಿಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಸಾಗರ ತಾಲೂಕಿನ ಜೋಗದಲ್ಲಿ ನಡೆದಿದೆ. ಸಾಗರ ತಾಲೂಕಿನ ಜೋಗದ ಶಾಲೆಯಲ್ಲಿ ಬಿಸಿ ಊಟ ತಯಾರು ಮಾಡುವ ಶಿವಮ್ಮ ಹಾಗೂ ಶೋಭಾ ಮೋಸ ಹೋದವರು. ಜೋಗದ ದೇವಿಕಾ ಹಾಗೂ ಅವರ ಮಗ ಚಂದನ್ ಚೀಟಿ ಹೆಸರಿನಲ್ಲಿ ಕೋಟ್ಯಂತರ ರೂ. ವಂಚಿಸಿದ್ದಾರೆ ಎನ್ನಲಾಗಿದೆ.
ಹಲವು ವರ್ಷಗಳಿಂದ ಜೋಗದ ಟಿ.ಎಂ.ಶೆಡ್ ನಲ್ಲಿ ವಾಸವಾಗಿರುವ ದೇವಿಕಾ ಹಾಗೂ ಅವರ ಮಗ ಚಂದನ್, 2019 ರಲ್ಲಿ ಅದೇ ಏರಿಯಾದ ಶೋಭಾ ಹಾಗೂ ಶಿವಮ್ಮ ಎಂಬುವರ ಬಳಿ ಹೋಗಿ ನಾವು ಚೀಟಿ ನಡೆಸುತ್ತಿದ್ದು, ನಮ್ಮ ಬಳಿ ಕಟ್ಟಿ ಎಂದು ಪುಸಲಾಯಿಸಿ ಚೀಟಿ ಕಟ್ಟಿಸಿಕೊಂಡಿದ್ದಾರೆ. ಶೋಭಾ ಅವರು 3 ಲಕ್ಷದ 3 ಚೀಟಿಯನ್ನು ಹಾಗೂ ಶಿವಮ್ಮ ಎಂಬುವರು 2 ಲಕ್ಷದ ಚೀಟಿಯನ್ನು ಹಾಕಿದ್ದಾರೆ.
ದೇವಿಕಾ ಹಾಗೂ ಚಂದನ್ 25 ಚೀಟಿಯನ್ನು ಸರಿಯಾಗಿ ಕಟ್ಟಿಸಿ ಕೊಂಡು 26 ನೇ ಚೀಟಿಯನ್ನು ಕಟ್ಟಲು ಹೋದಾಗ ನಿಮ್ಮ ಹಣವನ್ನು ವಾಪಸ್ ನೀಡಲು ನಮಗೆ ಸಮಯಬೇಕು ಎಂದು ನಂಬಿಸಿದ್ದಾರೆ. ಎರಡು ವರ್ಷ ಮುಗಿದರೂ ಸಹ ಹಣ ವಾಪಸ್ ನೀಡಿಲ್ಲ. ಹೀಗಾಗಿ ಆರೋಪಿಗಳ ವಿರುದ್ಧ ಜೋಗ ಪೊಲೀಸ್ ಠಾಣೆಯಲ್ಲಿ ವಂಚನೆಗೊಳಗಾದವರು ದೂರು ನೀಡಿದ್ದಾರೆ.
![ದೂರು ಪ್ರತಿ](https://etvbharatimages.akamaized.net/etvbharat/prod-images/14143656_smggg.jpg)
ಶೋಭಾ ಹಾಗೂ ಶಿವಮ್ಮ ಇಬ್ಬರು ಬಿಸಿಯೂಟ ತಯಾರಕರಾಗಿದ್ದು, ಕಷ್ಟಪಟ್ಟು ಹಣ ಕೂಡಿಟ್ಟು ಚೀಟಿ ಕಟ್ಟಿದ್ದಾರೆ. ಶೋಭಾ ಅವರಿಗೆ 7 ಲಕ್ಷದ 10 ಸಾವಿರ ರೂ. ಹಾಗೂ ಶಿವಮ್ಮ ಅವರಿಗೆ 5 ಲಕ್ಷದ 88 ಸಾವಿರ ರೂ. ಹಣ ಬರಬೇಕಿದೆ. ಈ ಹಿಂದೆ ಸ್ಥಳೀಯರು ಪಂಚಾಯಿತಿ ನಡೆಸಿ, ಆರೋಪಿಗಳು ಹಣ ಹಿಂತಿರುಗಿಸಲು ಕಾಲವಕಾಶ ನೀಡಿದ್ದರು. ಆದರೂ ಹಣ ಪಾವತಿ ಮಾಡದ ಕಾರಣ ನಮಗೆ ದೇವಿಕಾ ಹಾಗೂ ಚಂದನ್ ಅವರಿಂದ ಹಣ ವಾಪಸ್ ಕೊಡಿಸಿ ಎಂದು ದೂರು ನೀಡಿದ್ದಾರೆ
ಆರೋಪಿಗಳಿಗೆ ಆತಿಥ್ಯ ನೀಡಿದ ಪೊಲೀಸರು:
ಚೀಟಿ ಹಣ ನೀಡದೇ ಮೋಸ ಮಾಡಿರುವ ದೇವಿಕಾ ಹಾಗೂ ಪುತ್ರ ಚಂದನ್ ಅವರನ್ನು ಠಾಣೆಗೆ ಕರೆಯಿಸಿ, ವಿಚಾರಿಸುವ ಬದಲು ಜೋಗ ಪೊಲೀಸರು ಆತಿಥ್ಯ ನೀಡಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನು ಬಂಧಿಸದೇ ಪೊಲೀಸರು ಮೀನಮೇಷ ಎಣಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಂತರ ರಾಜ್ಯ ಬಿಸಿಯೂಟ ತಯಾರಕರ ಸಂಘದ ರಾಜ್ಯ ಕಾರ್ಯದರ್ಶಿ ಹನುಮಕ್ಕ ಹಾಗೂ ದೂರುದಾರರು ಠಾಣೆಯ ಮುಂದೆ ಧರಣಿ ನಡೆಸಿದ ಮೇಲೆ ಪೊಲೀಸರು ಬಂಧಿಸುವ ನಾಟಕವಾಡಿದ್ದಾರೆ. ಹೀಗಾಗಿ, ಹಣ ಕಳೆದುಕೊಂಡವರು ನ್ಯಾಯಕ್ಕಾಗಿ ಸಾಗರ ಡಿವೈಎಸ್ಪಿ ಭೇಟಿಯಾಗಲು ಸಿದ್ಧರಾಗಿದ್ದಾರೆ.