ಶಿವಮೊಗ್ಗ: ಅಡಿಕೆ ಮರಗಳಿಗೆ ಎಲೆಚುಕ್ಕಿ ಬಾಧೆ ಕಾಣಿಸಿಕೊಂಡಿದ್ದು ಗಿಡಗಳು ಸಾಯುತ್ತಿವೆ. ಇದರಿಂದ ನಷ್ಟವುಂಟಾಗಿ ರೈತರು ಬೀದಿಗೆ ಬೀಳುವಂತಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ರಾಜ್ಯ ರೈತ ಸಂಘದ ಮುಖಂಡ ಕೆ.ಟಿ ಗಂಗಾಧರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಬ್ಬರು ಅಡಿಕೆ ಬೆಳೆಗಾರರು ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಹಕಾರ ಸಂಘದ ಸೇರಿದಂತೆ ನಾನಾ ಬ್ಯಾಂಕ್ಗಳಲ್ಲಿ ಅಡಿಕೆ ಬೆಳೆಗಾರರು ಮಾಡಿರುವ ಸಾಲಗಳನ್ನು ರಾಜ್ಯಸರ್ಕಾರ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಸಿಎಂ ನೆಪಮಾತ್ರಕ್ಕೆ ಬಂದು ಹೋದ್ರು: ಅಡಿಕೆಗೆ ಕೊಳೆ ರೋಗ, ಎಲೆಚುಕ್ಕಿ ರೋಗ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರ ಏಳು ಜನರ ಸಮಿತಿ ರಚಿಸಿದೆ. ಸಮಿತಿ ಪ್ರವಾಸ ಕೂಡ ಮಾಡಿದೆ. ಆದರೆ, ಪರಿಹಾರದ ಮಾರ್ಗವನ್ನು ತಿಳಿಸಲೂ ಇಲ್ಲ. ಸಮಿತಿಯ ವರದಿಯೂ ಹೊರಬರಲಿಲ್ಲ. ಮುಖ್ಯಮಂತ್ರಿಗಳು ನೆಪಮಾತ್ರಕ್ಕೆ ಬಂದು ಹೋದರು. ಸಮಗ್ರವಾದ ಅಭಿಪ್ರಾಯ ಸರ್ಕಾರದಿಂದ ಬರಲಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಅಡಿಕೆ ಮಂಡಳಿ ರಚಿಸಬೇಕು. ಕೇಂದ್ರ ಸರ್ಕಾರ ಕೂಡ ಅಡಿಕೆ ಬೆಳೆಗಾರರ ನೆರವಿಗೆ ಬರಬೇಕು. ಅಡಿಕೆ ಬೆಳೆ ಆಮದು ಕೇಂದ್ರ ಸರ್ಕಾರವು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಭತ್ತದ ಬೆಲೆ ಇಳಿಕೆ: ರಾಜ್ಯ ಸರ್ಕಾರದ ಎಪಿಎಂಸಿ ಕಾಯಿದೆಯಿಂದ ಭತ್ತದೆ ಬೆಲೆ ಕುಂಠಿತವಾಗಿದೆ. ಕ್ವಿಂಟಾಲ್ 3100ರೂ. ಇದ್ದ ಬೆಲೆ ಈಗ 2100ಕ್ಕೆ ತಲುಪಿದೆ. ೧ಸಾವಿರ ರೂ,ನಷ್ಟವಾಗಿದೆ. ಇದು ಮಾರುಕಟ್ಟೆಯ ಸಂಚು. ರಾಜ್ಯಸರ್ಕಾರ ಕೂಡಲೇ ಎಪಿಎಂಸಿ ಕಾಯಿದೆ ವಜಾ ಮಾಡಬೇಕು. ಭತ್ತದ ಖರೀದಿ ಕೇಂದ್ರ ತಕ್ಷಣವೇ ತೆರೆಯಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ರೈತರ ಸಾವು