ಶಿವಮೊಗ್ಗ: ಆಗಸ್ಟ್ 9 ರಂದು ಶಿವಮೊಗ್ಗದಲ್ಲಿನ ತುಂಗಾ ನದಿಯ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಸೇತುವೆ ಮೇಲೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ಸದ್ಯ ದುರಸ್ತಿ ಕಾರ್ಯ ಚುರುಕಿನಿಂದ ನಡೆಯುತ್ತಿದೆ.
ಲೋಕೋಪಯೋಗಿ ಇಲಾಖೆಯ ವತಿಯಿಂದ ದುರಸ್ತಿ ಕಾರ್ಯ ಚುರುಕಾಗಿ ನಡೆಯುತ್ತಿದೆ. ಸೇತುವೆ ಸುಮಾರು 130 ವರ್ಷಗಳಷ್ಟು ಹಳೆಯದಾದುದರಿಂದ ಸೇತುವೆ ಮೇಲೆ ಎಲ್ಲಿಯವರೆಗೆ ಬಿರುಕು ಇದೆ ಎಂದು ನೋಡಲಾಗುತ್ತಿದೆ. ಸದ್ಯ ಸೇತುವೆ ಮೇಲಿನ ಭಾಗದಲ್ಲಿ ಮಾತ್ರ ಬಿರುಕು ಕಂಡು ಬಂದಿದೆ. ಕಳೆಗೆ ಯಾವುದೇ ಬಿರುಕುಗಳು ಇಲ್ಲ. ಇದರಿಂದ ಸೇತುವೆ ಪುಲ್ ಸೇಫ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 3ರಿಂದ ಪ್ರಾರಂಭವಾದ ಮಳೆಯಿಂದ ತುಂಗಾ ನದಿ ತುಂಬಿ ಹರಿಯುತ್ತಿತ್ತು. ಈ ವೇಳೆ ತುಂಗಾ ಸೇತುವೆಯ ಅಕ್ಕಪಕ್ಕದ ಏರಿಯಾಗಳಲ್ಲಿ ನೀರು ನುಗ್ಗಿ ಸಾಕಷ್ಟು ಹಾನಿಯನ್ನುಂಟು ಮಾಡಿತ್ತು. ನದಿಯಲ್ಲಿ ಸತತ ಒಂದು ವಾರಗಳ ಕಾಲ 1.50 ಲಕ್ಷ ಕ್ಯೂಸೆಕ್ ನೀರು ಹರಿದು ಬಂದ ಕಾರಣ ಸೇತುವೆ ಹಾಗೂ ರಸ್ತೆ ಸಂಪರ್ಕ ಮಾಡುವ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದರಿಂದ ಜಿಲ್ಲಾಡಳಿತ ಸೇತುವೆ ಬಿರುಕು ಸರಿಪಡಿಸಿ ಕಾಮಗಾರಿ ನಡೆಸುವಂತೆ ತಿಳಿಸಲಾಗಿತ್ತು. ಇದರಿಂದ ಲೋಕೋಪಯೋಗಿ ಇಲಾಖೆಯು ಕಾಮಗಾರಿ ಕೈಗೆತ್ತುಕೊಂಡಿದೆ. ಸದ್ಯ ರಸ್ತೆಯಲ್ಲಿ ಬಿರುಕು ಕಂಡ ಕಡೆ ಅಗೆದು ನೋಡಲಾಗುತ್ತಿದೆ.
ನದಿ ನೀರು ಇಷ್ಟು ವರ್ಷ ಹರಿದ ಪರಿಣಾಮ ಸೇತುವೆಯ ಪಿಲ್ಲರ್ಗಳಲ್ಲಿ ಸಣ್ಣಪುಟ್ಟ ಬಿರುಕುಗಳಿವೆ. ಇದನ್ನು ಸರಿ ಮಾಡಬಹುದಾಗಿದೆ. ಕಾಮಗಾರಿ ವೇಗವಾಗಿ ನಡೆಯುತ್ತಿರುವುದರಿಂದ ಇನ್ನೂ ಹದಿನೈದು ದಿನಗಳಲ್ಲಿ ಸೇತುವೆಯನ್ನು ಸಂಚಾರಕ್ಕೆ ಮುಕ್ತ ಮಾಡಿಕೊಡಲಾಗುವುದು ಎಂದು ಕಾಮಗಾರಿ ಗುಣಮಟ್ಟ ಪರೀಕ್ಷಕ ಶಿವಕುಮಾರ್ ಹಂಪಾಳಿ ಹೇಳಿದರು.