ಶಿವಮೊಗ್ಗ: ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿರೋಧ ಮಾಡುವವರು ಸುಪ್ರಿಂ ಕೋರ್ಟ್ನ ತೀರ್ಪನ್ನೇ ವಿರೋಧಿಸಿದಂತೆ. ಹೀಗಾಗಿ ಅಂತವರು ಅರಿತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಪಕ್ಷ ನಾಯಕ ಪರೋಕ್ಷವಾಗಿ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು.
ನಗರದಲ್ಲಿನ ಮಾಚೇನಹಳ್ಳಿ ಕೈಗಾರಿಕಾ ಸಂಘದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಹಣ ನೀಡಿ ಎಂದು ಯಾರನ್ನು ಒತ್ತಾಯ ಮಾಡಿಲ್ಲ. ಇಂದು ಕೈಗಾರಿಕೋದ್ಯಮಿಗಳು ಮಂದಿರ ನಿರ್ಮಾಣಕ್ಕೆ 70 ಲಕ್ಷ ರೂ ನೀಡಿದ್ದಾರೆ. ಯಾರ ಬಳಿಗೂ ಹೋಗಿ ಹಣ ನೀಡಿ ಎಂದು ಕೇಳಿಲ್ಲ. ರಾಜ್ಯದ ಉದ್ದಗಲಕ್ಕೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಲೇಬೇಕು ಎಂದು ಜನರು ಹಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಓದಿ: ಶಾಮನೂರು ಶಿವಶಂಕರಪ್ಪ ಒಡೆತನದ ಮೆಡಿಕಲ್ ಕಾಲೇಜುಗಳ ಮೇಲೆ ಐಟಿ ದಾಳಿ
ಯಾರಿಗೂ ಬಲವಂತ ಮಾಡಿ ಹಣ ನೀಡಿ ಎಂದು ಹೇಳಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಯಾರ ಮನೆಗೆ ಹೋದರು ಸ್ವಯಂ ಪ್ರೇರಿತರಾಗಿ ಹಣ ನೀಡುತ್ತಿದ್ದಾರೆ. ಇದನ್ನು ಟೀಕೆ ಮಾಡುವ ಮೂಲಕ ಅನಗತ್ಯವಾಗಿ ಗೊಂದಲವನ್ನು ಸೃಷ್ಟಿಸಬಾರದು. ನಿಮಗೆ ಇಷ್ಟ ವಿದ್ದರೆ ಹಣ ನೀಡಿ, ಇಲ್ಲವಾದರೆ ಬೇಡ. ಬೇರೆಯವರು ಹಣ ಕೊಡುವುದಕ್ಕೆ ಕಲ್ಲು ಹಾಕಬೇಡಿ. ಟೀಕೆ ಮಾಡುವವರು ಮೊದಲು ಇದನ್ನು ತಿಳಿದುಕೊಳ್ಳಬೇಕು. ನಾನು ಅಯೋಧ್ಯೆಯಲ್ಲಿನ ರಾಮ ಮಂದಿರಕ್ಕೆ ಹಣ ನೀಡಲ್ಲ, ನಮ್ಮೂರಿನ ರಾಮ ಮಂದಿರಕ್ಕೆ ನೀಡುತ್ತೇನೆ ಎನ್ನುವವರು ಗಮನಿಸಬೇಕು ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಸಿಎಂ ಟಾಂಗ್ ನೀಡಿದರು.