ಶಿವಮೊಗ್ಗ: ಜಿಲ್ಲೆಯ ಡಿಸಿಸಿ ಬ್ಯಾಂಕ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಈಗಾಗಲೇ ಅರ್ಜಿಯನ್ನು ಆಹ್ವಾನಿಸಿ ಮೂರು ವರ್ಷವೇ ಕಳೆದಿವೆ. ಆದರೆ ಇದುವರೆಗೆ ನೇಮಕಾತಿ ಮಾಡಿಕೊಳ್ಳಲು ಮಾತ್ರ ಬ್ಯಾಂಕ್ ಮಿನಾಮೇಷ ಎಣಿಸುತ್ತಿದೆ. ಹೀಗಾಗಿ ಐದು ಸಾವಿರ ಅಭ್ಯರ್ಥಿಗಳು ಉದ್ಯೋಗದ ನಿರೀಕ್ಷೆಯಲ್ಲಿದ್ದು, 84 ಹುದ್ದೆಗಳನ್ನು ಯಾವಾಗ ಭರ್ತಿ ಮಾಡುತ್ತಾರೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಆದರೆ ನೇಮಕಾತಿ ಮಾಡಿಕೊಳ್ಳಬೇಕಿದ್ದ ಡಿಸಿಸಿ ಬ್ಯಾಂಕ್ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಮುಂದೆ ಬರುತ್ತಿಲ್ಲ. ಹೀಗಾಗಿ, ಯುವ ಕಾಂಗ್ರೆಸ್ ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳು ಇದೀಗ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ಏನಿದು ಸಮಸ್ಯೆ?
2018-19 ನೇ ಸಾಲಿನಲ್ಲಿ ವಿವಿಧ ಹುದ್ದೆಗಳಿಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅರ್ಜಿ ಆಹ್ವಾನಿಸಿತ್ತು. ಕಿರಿಯ ಸಹಾಯಕರು, ಕ್ಷೇತ್ರಾಧಿಕಾರಿಗಳು ಹಾಗೂ ನಗದು ಗುಮಾಸ್ತರ ಸುಮಾರು 84 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗಾಗಿ ಸುಮಾರು 5 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಜೊತೆಗೆ ಬ್ಯಾಂಕ್ ಗೆ ಪ್ರತಿಯೊಬ್ಬರು 924 ರೂ. ಪರೀಕ್ಷಾ ಶುಲ್ಕ ಪಾವತಿಸಿದ್ದರು.
ನಂತರ ಡಿಸಿಸಿ ಬ್ಯಾಂಕ್ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ವಿತರಿಸಲಾಗಿತ್ತಾದರೂ ಕಾರಣಾಂತರದಿಂದ ಪರೀಕ್ಷೆ ಮುಂದೂಡಲಾಗಿತ್ತು. ಕಳೆದ ಮೂರು ವರ್ಷಗಳಿಂದ ಪರೀಕ್ಷೆ ನಡೆಸದೇ ಬ್ಯಾಂಕ್ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಅಭ್ಯರ್ಥಿಗಳು ಆಕ್ರೋಶಗೊಂಡಿದ್ದಾರೆ. ಇದೀಗ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್ ಎದುರು ಪ್ರತಿಭಟನೆ ಆರಂಭಿಸಿದ್ದಾರೆ.
ಬ್ಯಾಂಕ್ನಲ್ಲಿ ಖಾಲಿ ಇದ್ದ 84 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಾಗ ಅಭ್ಯರ್ಥಿಗಳಿಂದ ಡಿಸಿಸಿ ಬ್ಯಾಂಕ್ ಸುಮಾರು 50 ಲಕ್ಷ ರೂ. ನಷ್ಟು ಪರೀಕ್ಷಾ ಶುಲ್ಕವನ್ನು ಸಹ ವಸೂಲಿ ಮಾಡಿದೆ. ಆದರೆ, ಪರೀಕ್ಷೆಯನ್ನು ಮಾತ್ರ ನಡೆಸುತ್ತಿಲ್ಲ. ಈಗಾಗಲೇ ಹಲವು ಅಭ್ಯರ್ಥಿಗಳಿಗೆ ವಯೋಮಿತಿ ಮೀರುತ್ತಿರುವುದರಿಂದ ತ್ವರಿತವಾಗಿ ಪರೀಕ್ಷೆ ನಡೆಸಲು ಒತ್ತಾಯ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಇಂದು ಉದ್ಯೋಗಾಕಾಂಕ್ಷಿಗಳು ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿ ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಓದಿ: SC, ST ನಕಲಿ ಪ್ರಮಾಣಪತ್ರ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ: ಸಿಎಂ ಎಚ್ಚರಿಕೆ