ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಶಿವಕುಮಾರ್ ಹಾಗೂ ಉಪಮೇಯರ್ ಆಗಿ ಲಕ್ಷ್ಮೀ ಶಂಕರ ನಾಯ್ಕ್ ಆಯ್ಕೆಯಾಗಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಚುನಾವಣೆ ನಡೆದಿದ್ದು, ಮೇಯರ್ ಸ್ಥಾನ ಎಸ್ಸಿ ಹಾಗೂ ಉಪ ಮೇಯರ್ ಸ್ಥಾನ ಬಿಸಿಎಂ(ಬಿ) ಗೆ ಮೀಸಲಾಗಿತ್ತು.
ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಪುರಲೆ ಬಡಾವಣೆಯ ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಒಮ್ಮತದ ಅಭ್ಯರ್ಥಿಯಾಗಿ ಮಲವಗೊಪ್ಪದ ಆರ್.ಸಿ.ನಾಯ್ಕ್ ಸ್ಪರ್ಧಿಸಿದ್ದರು. ಅದೇ ರೀತಿ ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಲಕ್ಷ್ಮೀ ಶಂಕರ ನಾಯ್ಕ್ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಾಯಕಿ ರೇಖಾ ರಂಗನಾಥ್ ಉಮೇದುವಾರಿಕೆ ಸಲ್ಲಿಸಿದ್ದರು.
ಶಿವಕುಮಾರ್ಗೆ 26 ಮತಗಳು ಲಭಿಸಿದರೆ, ಆರ್.ಸಿ. ನಾಯ್ಕ್ 11 ಮತ ಪಡೆದಿದ್ದಾರೆ. ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲಕ್ಷ್ಮೀ ಶಂಕರ ನಾಯ್ಕ್ಗೆ 26 ಮತಗಳು ಬಂದಿದ್ದು, ರೇಖಾ ರಂಗನಾಥ್ 11 ಮತ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಯಶಾಲಿಯಾದವರಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ: ನನ್ನ ಸ್ನೇಹಿತ ಸಿಎಂ ಇಬ್ರಾಹಿಂಗಾಗಿ ಸಂಗಮೇಶ್ಗೆ ಟಿಕೆಟ್ ತಪ್ಪಿಸಿದ್ದೆ: ಸಿದ್ದರಾಮಯ್ಯ