ಶಿವಮೊಗ್ಗ:ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಎರಡು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಎಲ್ಲೆಡೆ ಪ್ರಚಾರ ಸಭೆಗಳನ್ನ ಮಾಡುವ ಮೂಲಕ ಪಕ್ಷವನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಇಂದು ನಗರದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಜಿಲ್ಲೆಯ ಎಲ್ಲಾ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯನ್ನ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ, ಕಡಿಮೆ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ರೈಲ್ವೆ, ಹೈವೇಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅನೇಕ ಯೋಜನೆಗಳನ್ನು ತಂದಿದ್ದೇನೆ. ಹಾಗಾಗಿ ಜಿಲ್ಲೆಯ ಎಲ್ಲಾ ವರ್ಗದ ಜನರಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಪಕ್ಷವನ್ನ ಸಂಘಟಿಸುವ ಕಾರ್ಯ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾಂಗ್ರೆಸ್ ಪಕ್ಷವು ಅನೇಕ ಹಗರಣಗಳ ಮೂಲಕ ದೇಶವನ್ನ ಲೂಟಿ ಮಾಡಿದೆ. 70 ವರ್ಷಗಳಲ್ಲಿ ಅವರ ಸಾಧನೆ ಏನು ಎಂಬುವುದನ್ನು ಜನರಿಗೆ ತಿಳಿಸಲಿ. ಮೋದಿಯವರ ನೇತೃತ್ವದ ಸರ್ಕಾರ ಕಡಿಮೆ ಅವಧಿಯಲ್ಲಿ ಏನು ಮಾಡಿದೆ ಎಂಬುದನ್ನ ನಾವು ತೋರಿಸುತ್ತೇವೆ ಎಂದು ಸವಾಲು ಹಾಕಿದರು.
ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ದೇಶದ ಗಡಿ ಕಾಯಲು ಸೈನಿಕರಿದ್ದಂತೆ. ದೇಶವನ್ನ ಕಟ್ಟುವ ಕೆಲಸವನ್ನ ನಾವು ಮಾಡುತ್ತೇವೆ ಎಂದರು.
ಈಗ ನಡೆಯುತ್ತಿರುವ ಚುನಾವಣೆ ಕೇವಲ ರಾಘವೇಂದ್ರ ಅವರಿಗೆ ಸಂಬಂಧಪಟ್ಟ ಚುನಾವಣೆ ಅಲ್ಲ. ದೇಶಕ್ಕೆ ಸಂಬಂಧಪಟ್ಟ ಚುನಾವಣೆ, ದೇಶದ ಘನತೆ ಗೌರವ ಉಳಿಸುವ ಚುನಾವಣೆ ಎಂದರು.