ರಾಮನಗರ : ಒಕ್ಕಲಿಗ ಸಂಘದ ಅಧ್ಯಕ್ಷನಾಗಿ ನಾನು ಪ್ರಾಮಾಣಿಕ ಸೇವೆ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಸಂಘ ಸಾಕಷ್ಟು ಅಭಿವೃದ್ಧಿ ಕಂಡಿದೆ. ನನ್ನ ಅಭಿವೃದ್ಧಿ ಸಹಿಸದ ಕೆಲವರು ಇಲ್ಲಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ ಎಂದು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ.ಅಪ್ಪಾಜಿಗೌಡ ಹೇಳಿದರು.
ಜಿಲ್ಲೆಯ ಚನ್ನಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 3 ವರ್ಷ ಒಕ್ಕಲಿಗರ ಸಂಘದ ಅಧ್ಯಕ್ಷನಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಕೆಲ ಪಟ್ಟಬದ್ದ ಹಿತಾಸಕ್ತಿಗಳು ಸಂಘಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಾಗವನ್ನು ಕಬಳಿಸಲು ಹುನ್ನಾರ ನಡೆಸಿದ್ದರು. ಇದನ್ನು ನಾನು ತಡೆದಿದ್ದೇನೆ. ಇದಲ್ಲದೆ ರಾಜ್ಯಾದ್ಯಂತ ಒಕ್ಕಲಿಗರ ಸಂಘಟನೆ ಜೊತೆಗೆ ಸಂಘದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದರು.
ಸಂಘದ ಹಣ ದುರ್ಬಳಕೆ, ಮೆಡಿಕಲ್ ಸೀಟ್ ಹಂಚಿಕೆಯಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಕೇಸ್ ದಾಖಲಿಸಿದ್ದಾರೆ. ಇದಕ್ಕೆ ನಾನು ಹೆದರುವ ಪ್ರಶ್ನೆಯೇ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧಿಸಬಾರದು ಎಂದುಕೊಂಡಿದ್ದೆ. ಆದರೆ, ನನ್ನ ಮೇಲೆ ಕೇಳಿ ಬಂದ ಆರೋಪಗಳಿಗೆ ಸಂಘದ ಚೌಕಟ್ಟಿನೊಳಗೆ ಉತ್ತರಿಸಬೇಕೆಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮೆಡಿಕಲ್ ಸೀಟ್ಗಳ ಬ್ರೋಕರ್ ಕೆಂಚಪ್ಪಗೌಡ : ಶಿವಣ್ಣ ಆರೋಪ
ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಕೆಂಚಪ್ಪಗೌಡ ಅವರ ಮನೆಯಲ್ಲಿ ಮೆಡಿಕಲ್ ಸೀಟ್ ಹಂಚಿಕೆ ಕುರಿತು ಡೀಲ್ ನಡೆಸಿದ್ದಾರೆ. ಕೆಂಚಪ್ಪಗೌಡ ತಾನು ಭ್ರಷ್ಟಾಚಾರ ಮಾಡಿ ಇತರರ ಮೇಲೆ ಆಪಾದನೆ ಹೊರಿಸಿದ್ದಾನೆ. ಇಂತಹ ಭ್ರಷ್ಟರು ಈ ಬಾರಿಯ ಚುನಾವಣೆಯಲ್ಲಿ ಆಯ್ಕೆಯಾಗಬಾರದು ಎಂದು ಚನ್ನಪಟ್ಟಣದ ಕುಕ್ಕೂರುದೊಡ್ಡಿ ಶಿವಣ್ಣ ಗುಡುಗಿದರು.