ರಾಮನಗರ: ಮಾಗಡಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ನಾಡ ಬಂದೂಕು ತಯಾರು ಮಾಡುತ್ತಿದ್ದ ಖತರ್ನಾಕ್ ಆರೋಪಿ ಸೇರಿದಂತೆ ಒಂಟಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮಾಗಡಿ ಸಿಪಿಐ ಮಂಜುನಾಥ್, ಪಿಎಸ್ಐ ಶ್ರೀಕಾಂತ್ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಗಿರೀಶ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವಿಜಿ ಅಲಿಯಾಸ್ ವಿಜಯ್ ಕುಮಾರ್ ನಕಲಿ ನಾಡ ಬಂದೂಕುಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಬಂಧಿತ ಆರೋಪಿ. ಇದೇ ಜನವರಿ 5 ರಂದು ಮಾಗಡಿ ಟೌನ್ ಖಾಸಗಿ ಬಸ್ ನಿಲ್ದಾಣದ ಬಳಿ ಒಂದು ಕಾರು ಅನುಮಾನಾಸ್ಪದವಾಗಿ ನಿಂತಿತ್ತು. ಈ ವೇಳೆ ಪೊಲೀಸರು ಕಾರಿನಲ್ಲಿದ್ದ ಆರೋಪಿಯನ್ನು ವಿಚಾರಿಸಿ ಕಾರು ಶೋಧಿಸಿದಾಗ ನಾಡ ಬಂದೂಕು ಪತ್ತೆಯಾಗಿದೆ. ಕೂಡಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಒಂದೊಂದೇ ಸತ್ಯ ಹೊರ ಬಿದ್ದಿದೆ.
ಆರೋಪಿ ಚಿಕ್ಕಬಳ್ಳಾಪುರ ಜಿಲ್ಲೆಯ ನಾಗಸಾನಹಳ್ಳಿಯವನಾಗಿದ್ದ. ಇವನ ತಂದೆ ನಾಡ ಬಂದೂಕುಗಳ ಸರ್ವೀಸ್ ಮಾಡುವ ಅಂಗಡಿ ಇಟ್ಟುಕೊಂಡಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡ ವಿಜಯಕುಮಾರ್ ಎಸ್.ಬಿ.ಎಂ.ಎಲ್ನ ನಖಲಿ ನಾಡ ಬಂದೂಕುಗಳನ್ನು ತಯಾರುಮಾಡುವ ವೃತ್ತಿ ಆರಂಭಿಸಿ, ಬಂದೂಕುಗಳನ್ನು ಮಾಗಡಿ ತಾಲೂಕಿನ 10 ರೈತರಿಗೆ 10-15 ಸಾವಿರ ರೂ.ಗೆ ಮಾರಾಟ ಮಾಡಿದ್ದ. ಇದೀಗ ಪೊಲೀಸರು ಅರ್ಧ ತಯಾರು ಮಾಡಿದ್ದ ಒಂದು ಬಂದೂಕು ಸೇರಿದಂತೆ ಒಟ್ಟು 12 ಬಂದೂಕುಗಳನ್ನು ವಶಪಡಿಸಿಕೊಂಡು 11 ಮಂದಿಯನ್ನು ಬಂಧಿಸಿದ್ದಾರೆ.
4 ಮಂದಿ ಅಂತರ್ ಜಿಲ್ಲಾ ಮನೆ ಕಳ್ಳರ ಬಂಧನ
ಇದೇ ಮಾಗಡಿ ಪೊಲೀಸರು 4 ಮಂದಿ ಅಂತರ್ ಜಿಲ್ಲಾ ಮನೆ ಕಳ್ಳರನ್ನು ಕೂಡ ಬಂಧಿಸಿದ್ದಾರೆ. ಮಂಡ್ಯ ಟೌನ್ ನಿವಾಸಿಗಳಾದ ಸುನೀಲ್ ಕುಮಾರ್, ಸಂತೋಷ, ಪುಷ್ಪಾ, ಮಾಲಾ ಬಾಯಿ ಬಂಧಿತ ಆರೋಪಿಗಳು. ಇವರನ್ನು ವಿಚಾರಣೆ ನಡೆಸಿದ್ದು, ರಾಮನಗರ ಜಿಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ 9 ಪ್ರಕರಣಗಳು, ಮಾದನಾಯಕನಹಳ್ಳಿ ಠಾಣೆಯ ಒಂದು ಪ್ರಕರಣ ಹಾಗೂ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಒಂದು ಪ್ರಕರಣ ಸೇರಿ ಒಟ್ಟು11ಮನೆ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿವೆ.
ಒಂಟಿ ಮನೆಗಳ ಟಾರ್ಗೆಟ್ ಮಾಡಿ ಮನೆ ಹಿಂಬಾಗಿಲನ್ನು ಹೊಡೆದು ಕಳ್ಳತನ ಮಾಡುತ್ತಿದ್ದರು. ಸುನೀಲ್ ಹಾಗೂ ಸಂತೋಷ್ ಮನೆ ಕಳ್ಳತನ ಮಾಡಲು ಹೊದರೆ ಮಾಲಾ ಹಾಗೂ ಪುಷ್ಪ ಆಟೋದಲ್ಲಿ ಕುಳಿತು ಹೊರಗಿನ ಚಲನವಲನಗಳ ಬಗ್ಗೆ ಮಹಿತಿ ನೀಡುತ್ತಿದ್ದರು. ಇದೀಗ ಬಂಧಿತರಿಂದ 14 ಲಕ್ಷ ರೂ. ಮೌಲ್ಯದ 250 ಗ್ರಾಂ ಚಿನ್ನಾಭರಣಗಳು, 107 ಗ್ರಾಂ ಬೆಳ್ಳಿ ಸೇರಿದಂತೆ ಎರಡು ಎಲ್ಇಡಿ ಟಿವಿಗಳನ್ನು ವಶಕ್ಕೆ ಪಡೆಯಲಾಗಿದೆ.