ರಾಯಚೂರು: ಜಿಲ್ಲೆಯಲ್ಲಿ ಕಾಡಿನಿಂದ ನಾಡಿಗೆ ಬಂದ ತೋಳವೊಂದು ಜನರ ಮೇಲೆ ಅಟ್ಟಹಾಸ ಮೆರೆದಿದೆ. ತೋಳದ ದಾಳಿಯಿಂದ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿರವಾರ ತಾಲೂಕಿನ ಕವಿತಾಳ ಸಮೀಪದ ಚಿಲ್ಕರಾಗಿ, ಇರಕಲ್ ಗ್ರಾಮಗಳಲ್ಲಿ ನಡೆದಿದೆ.
ಚಿಲ್ಕರಾಗಿ ಗ್ರಾಮದ ಅಮರಪ್ಪ ಕುಂಬಾರ್, ವೀರಭದ್ರಪ್ಪ ಕುಂಬಾರ್, ಈರಮ್ಮ, ಹುಲುಗಪ್ಪ ಚಲುವಾದಿ ಸೇರಿದಂತೆ ಹಲವರು ಜನರು ಗಾಯಗೊಂಡಿದ್ದರೆ, ಇರಕಲ್ ಗ್ರಾಮದಲ್ಲಿ ಮೂವರಿಗೆ ತೋಳ ಕಚ್ಚಿದೆ. ಗಾಯಾಳುಗಳನ್ನು ಲಿಂಗಸೂಗೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯಿಂದ ರೊಚ್ಚಿಗೆದ್ದ ಇರಕಲ್ ಗ್ರಾಮಸ್ಥರು ತೋಳವನ್ನ ಹೊಡೆದು ಕೊಂದಿದ್ದಾರೆ.
ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಯಾವುದೇ ಅಧಿಕಾರಿ ಅಥವಾ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.