ರಾಯಚೂರು: ಕಳೆದ ಕೆಲ ವರ್ಷಗಳಿಂದ ಕಸದ ರಾಶಿಯಿಂದ ತುಂಬಿ ಅವಸಾನದಂಚಿಗೆ ತಲುಪಿದ್ದ ಜವಾಹರ ನಗರದ ಐತಿಹಾಸಿಕ ತೋಟದ ಬಾವಿಯನನ್ನು ವಿವಿಧ ಸಂಘ ಸಂಸ್ಥೆಗಳು ಸ್ವಚ್ಛಗೊಳಿಸಿದ್ದು, ಕೊನೆಗೂ ಮರುಜೀವ ಬಂದಿದೆ.
ಒಂದು ಕಾಲದಲ್ಲಿ ಸ್ಥಳೀಯ ಜನರ ದಾಹ ತೀರಿಸುತಿದ್ದ ಈ ಬಾವಿಗೆ ಸ್ಥಳೀಯರು ಕಸ ಸೇರಿದಂತೆ ಇತರೆ ವಸ್ತುಗಳನ್ನು ಹಾಕಿ ಬಾವಿಯ ಮೂಲ ರೂಪವನ್ನೇ ವಿರೂಪಗೊಳಿಸಿದ್ದರು. ಬಾವಿಯಲ್ಲಿ ನೀರು ಮಾಯವಾಗಿ ಪ್ಲಾಸ್ಟಿಕ್, ಕಸ, ಇತರೆ ವಸ್ತುಗಳಿಂದ ತುಂಬಿ ಗಬ್ಬು ನಾರುತ್ತಿತ್ತು. ಇಷ್ಟದರೂ ಸ್ಥಳೀಯ ಆಡಳಿತ ಮಾತ್ರ ಬಾವಿ ರಕ್ಷಣೆ ಮಾಡುವ ಗೋಜಿಗೆ ಹೋಗಿರಲಿಲ್ಲ. ನಗರಸಭೆ ನೆಪ ಮಾತ್ರಕ್ಕೆ ಬಾವಿಯ ಸುತ್ತ ತಂತಿಯ ಬೇಲಿ ಹಾಕಿ ಕಾಸ ಹಾಕಬೇಡಿ ಎಂಬ ನಾಮಫಲಕ ಹಾಕಿ ಕೈ ತೊಳೆದುಕೊಂಡಿತ್ತು.
ಬಾವಿಯ ಸ್ಥಿತಿ ನೋಡಿದ ಗ್ರೀನ್ ರಾಯಚೂರು, ಯುವ ಬ್ರಿಗೇಡ್ ಸೇರಿದಂತೆ ಇತರೆ ಕೆಲ ಸಂಘ ಸಂಸ್ಥೆಗಳು ಬಾವಿಯ ಸ್ಚಚ್ಛತಾ ಕಾರ್ಯಕ್ಕೆ ಕೈ ಹಾಕಿದ್ದವು. ಕಳೆದ ಎರಡು ವಾರಗಳಿಂದ ಸ್ವಚ್ಛತಾ ಕಾರ್ಯ ನಡೆಸಿ ಬಾವಿಯನ್ನು ಸಂಪೂರ್ಣ ಸ್ವಚ್ಛ ಮಾಡಿ ಬಾವಿಯಲ್ಲಿ ನೀರು ಸಂಗ್ರಹ ಮಾಡಲಾಗಿದೆ.
ಈ ಸ್ವಚ್ಛತಾ ಕಾರ್ಯದಲ್ಲಿ ಎಸ್ಪಿ ವೇದಮೂರ್ತಿ ಪಾಲ್ಗೊಂಡು ಬಾವಿಯನ್ನು ರಕ್ಷಿಸಲು ಮುಂದಾಗಿದ್ದು, ಸಂತೋಷದ ವಿಚಾರವಾಗಿದೆ. ಇನ್ನು ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಇಲಾಖೆ, ನಗರಸಭೆ, ಗ್ರಿನ್ ರಾಯಚೂರು, ಯುವ ಬ್ರಿಗೇಡ್, ಜಾಗೋ ರಾಯಚೂರು, ವಾರ್ಡ್ ನಂಬರ್ 5 ಅಭಿವೃಧ್ಧಿ ಸಮಿತಿ, ಮುನ್ನೂರು ಕಾಪು ಯುತ್ ಸೇವಾ ಸಮಿತಿ, ಡ್ರೀಮ್ ರಾಯಚೂರು, ಭಾರತೀಯ ಜೈನ ಸಂಘಟನೆ ಹಾಗೂ ಸಾರ್ವಜನಿಕರು ಸ್ವಚ್ಛತೆಯಲ್ಲಿ ಭಾಗವಹಿಸಿ ಬಾವಿಯನ್ನು ಕಸ ಮುಕ್ತ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.