ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಜರದಬಂಡಿ ಗ್ರಾಮದಲ್ಲಿ ಮಡಿವಾಳ ಸಮಾಜದ ಮಹಿಳೆಯ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧನ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಖಾಸಬಾವಿ ಬಳಿಯ ಮಡಿವಾಳ ಸಮುದಾಯ ಭವನದಿಂದ ತೀನ್ ಖಂದಿಲ್, ನಗರಸಭೆಯ ಮೂಲಕ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೊಲೆ ನಡೆದು ನಾಲ್ಕು ವರ್ಷಗಳಾದರೂ ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ, ಆರೋಪಿಗಳು ರಾಜಾರೋಶವಾಗಿ ತಿರುಗಾಡುತ್ತಿದ್ದಾರೆ, ಈ ಸಂಬಂಧ ಪ್ರಕರಣದ ಸಾಕ್ಷಿದಾರರ ಮೇಲೆ ಹಲ್ಲೆ ಮಾಡಿಸಿ ಊರು ಬಿಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
2015ರಲ್ಲಿ ಜರದಬಂಡಿ ಗ್ರಾಮದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಈ ಸಂಬಂಧ ಗಬ್ಬೂರು ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ರಾಜಕೀಯ ನಾಯಕರ ಪ್ರಭಾವದಿಂದ ತನಿಖೆ ನಡೆಸುವಲ್ಲಿ ಪೋಲೀಸರು ವಿಫಲರಾಗುದ್ದಾರೆ ಎಂದು ದೂರಿದರು.
ಸಂತ್ರಸ್ಥೆ ಕುಟುಂಬದ ಸದಸ್ಯ ಭೀಮಣ್ಣ ಎಂಬುವವರು ಪ್ರಕರಣದ ಸಾಕ್ಷಿಯಾಗಿರುವುದರಿಂದ ಪ್ರಭಾವಿ ನಾಯಕ ಸಮಾಜದವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಸಂತ್ರಸ್ಥೆ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.