ರಾಯಚೂರು: ಕರ್ನಾಟಕ ಏಕೀಕರಣ, ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ನಡೆಸಿದ ಹೋರಾಟಕ್ಕೆ ವೇದಿಕೆಯಾಗಿದ್ದ ರಾಯಚೂರಿನ ಜವಾಹರ್ ನಗರದಲ್ಲಿರುವ ಕರ್ನಾಟಕ ಸಂಘದಲ್ಲಿ ಇಂದು ಕನ್ನಡದ ಚಟುವಟಿಕೆಗಳು ವಿರಳಗೊಂಡಿವೆ. ಹೀಗಾಗಿ ಕನ್ನಡದ ಕಂಪು ಹರಿಸಿ ಹೋರಾಟದ ಕಿಚ್ಚು ಹೊತ್ತಿಸಿದ ಸಂಘಕ್ಕೆ ಕಾಯಕಲ್ಪವನ್ನೂ ನೀಡಬೇಕಾದ ಅಗತ್ಯ ಇದೆ.
ಕರ್ನಾಟಕದಲ್ಲಿ ಕನ್ನಡ ಅಭಿವೃದ್ಧಿಗಾಗಿ ಶ್ರಮಿಸಿದ ಧಾರವಾಡದ ವಿದ್ಯಾವರ್ಧಕ ಸಂಘದ ನಂತರ ಇಲ್ಲಿನ ಕರ್ನಾಟಕ ಸಂಘ ಎರಡನೇ ಸ್ಥಾನವನ್ನ ಪಡೆದುಕೊಂಡಿದೆ. 1928 ರಾಮನವಮಿಯಂದು ಕರ್ನಾಟಕ ಸಂಘ ಸ್ಥಾಪನೆ ಮಾಡಲಾಯಿತು.1946 ರಲ್ಲಿ ಹೈದರಾಬಾದ್ ನಿಜಾಮ್ ಸಂಸ್ಥಾನದ ಅವಧಿಯಲ್ಲಿ ಮಿರ್ಜಾ ಇಸ್ಮಾಯಿಲ್ ಈ ಐತಿಹಾಸಿ ಕಟ್ಟಡ ಕ್ಕೆ ಅಡಿಗಲ್ಲು ಹಾಕಿದ್ದರು. 1934 ರಲ್ಲಿ ಪಂಜೆ ಮಂಗೇಶರಾಯರ ಅಧ್ಯಕ್ಷತೆಯಲ್ಲಿ 20 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು 1935 ರಲ್ಲಿ ಆದ್ಯ ರಂಗಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕರ್ನಾಟಕ ಸಂಘದಲ್ಲಿ ನಡೆದಿತ್ತು. ನಂತರ ಡಿ.ವಿ.ಗುಂಡಪ್ಪನವರ ನೇತೃತ್ವದಲ್ಲಿ ಮೈಸೂರಿನ ಮುಖ್ಯ ನ್ಯಾಯಾಧೀಶರಾದ ನಿಟ್ಟೂರು ಶ್ರೀನಿವಾಸನವರಿಂದ ಕರ್ನಾಟಕ ಸಂಘ ಲೋಕಾರ್ಪಣೆ ಗೊಂಡಿತ್ತು.
ಕರ್ನಾಟಕ ಸಂಘದಲ್ಲಿ ಆಲೂರು ವೆಂಕಟರಾಯರು, ಜಿ.ಪಿ ರಾಜರತ್ನಮ್, ಪಂಡಿತ್ ತಾರಾನಾಥ ಸೇರಿದಂತೆ ಅನೇಕ ದಿಗ್ಗಜರು ಕರ್ನಾಟಕ ಸಂಘದಲ್ಲಿ ಕಾಲ ಕಳೆದು ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ್ದರು.1 933ರಲ್ಲಿ ಪಂಡಿತ ತಾರಾನಾಥರ ನಿಜಾಮ ಕರ್ನಾಟಕ ಮುನ್ನುಡಿ, 1961ರಲ್ಲಿ ಡಾ.ರಂ.ಮುಗಳಿಯವರ ರತ್ನನ ಕೃತಿ, 1964 ರಲ್ಲಿ ಶ್ರೀ ಕಂಠಯ್ಯ ನವರ ಷಡಕ್ಷರದೇವ ಕೃತಿ , ಧೃವ ನಾರಾಯಣ ಅವರ ಸ್ವಾತಂತ್ರ್ಯ ಆಂದೋಲನದಲ್ಲಿ ಜಿಲ್ಲೆ, ಬಿ.ಎನ್. ಅಂಗಡಿಯವರ ಸ್ವಾತಂತ್ರ್ಯ ಹೋರಾಟ ಮತ್ತು ನಮ್ಮಜಿಲ್ಲೆ, ರಾ.ಗು.ಜೋಶಿ ಅವರ ವಿಜಯ ಮಾಸಿಕ ಪತ್ರಿಕೆ, ಅರುಣ ಕಿರಣ , ಬಸವ ಸ್ಮರಣೆ, ಪುರಂದರ ಸ್ಮರಣೆ, ಪುಸ್ತಕ ಕೃತಿಗಳನ್ನು ಕರ್ನಾಟಕ ಸಂಘದಿಂದ ಹೊರತರಲಾಯಿತು.
ಕರ್ನಾಟಕ ಸಂಘದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿದ್ದು ಕವಿಗೋಷ್ಠಿ, ಪುಸ್ತಕ ಬಿಡುಗಡೆ, ನವೆಂಬರ್ 1 ರಂದು ನಾಡದೇವಿಯ ಭಾವಚಿತ್ರ ಮೆರವಣಿಗೆ ಮಾತ್ರ ನಡೆಯುತ್ತದೆ. ಅಲ್ಲದೇ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ 82 ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕರ್ನಾಟಕ ಸಂಘದಿಂದ ಅದ್ಯಕ್ಷರ ಮೆರವಣಿಗೆ ನಡೆದಿತ್ತು. ಕರ್ನಾಟಕ ಏಕೀಕರಣ ಹೋರಾಟದ ಸಂದರ್ಭದಲ್ಲಿ ನಡೆದಿದ್ದ ಕನ್ನಡ ಪರ ಚಟುವಟಿಕೆಗಳನ್ನು ಮುಂದುವರಿಸುವ ಉದ್ದೇಶದಿಂದ ಕರ್ನಾಟಕ ಸಂಘದ ಪಕ್ಕದಲ್ಲಿ ಸಭಾಭವನ ನಿರ್ಮಾಣಕ್ಕೆ 2015- 16 ಸಾಲಿನಲ್ಲಿ ಬಿಆರ್ಜಿಎಫ್ ಅನುದಾನದಡಿ ಅಡಿ ಒಂದು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದ್ರೆ, ಅದು ಈವರೆಗೆ ಪೂರ್ಣಗೊಂಡಿಲ್ಲ. ಇದು ಸಾಹಿತ್ಯ ವಲಯ ಹಾಗೂ ಕನ್ನಡಾಭಿಮಾನಿಗಳನ್ನ ಕೆರಳಿಸಿದೆ.