ರಾಯಚೂರು: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ತುರುವಿಹಾಳ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸಿಂಧನೂರು ತಾಲೂಕು ತುರುವಿಹಾಳ ಪಟ್ಟಣದ ಆದೇಶ, ಸೋಮನಾಥ, ರಮೇಶ್ ಬಂಧಿತರು. ಏಪ್ರಿಲ್ 12ರಂದು ಮಹಿಳೆಯ ಮೇಲೆ ಈ ಮೂವರು ಅತ್ಯಾಚಾರವೆಸಗಿದ್ದರು. ಮಹಿಳೆಯು ಬರ್ಹಿದೆಸೆಗೆ ಹೋಗಿ ವಾಪಸ್ ಮನೆಗೆ ಹಿಂತಿರುಗುತ್ತಿದ್ದಾಗ ಮಾರ್ಗದಲ್ಲಿ ಸಿಕ್ಕಿದ ಪರಿಚಿತ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಳು. ಆಗ ಅಲ್ಲಿಗೆ ಬಂದ ಈ ಮೂವರು ಕಾಮುಕರು ನೀವಿಬ್ಬರು ಅನೈತಿಕ ಸಂಬಂಧ ಹೊಂದಿದ್ದೀರಿ. ಈ ವಿಚಾರವನ್ನು ಊರಲ್ಲಿ ಎಲ್ಲರಿಗೂ ಹೇಳಿ ಮಾನ ಕಳೆಯುತ್ತೇವೆ ಎಂದು ಬೆದರಿಸಿದ್ದರು.
ಆನಂತರ ಮಹಿಳೆಯೊಂದಿಗೆ ಮಾತನಾಡುತ್ತಾ ನಿಂತಿದ್ದ ವ್ಯಕ್ತಿಯನ್ನ ಅಲ್ಲಿಂದ ಓಡಿಸಿ, ಪಟ್ಟಣದ ಹಳ್ಳದ ಬಳಿ ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲದೆ, ಅತ್ಯಾಚಾರವೆಸಗಿದ ಬಳಿಕ ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಜೀವ ಬೆದರಿಕೆ ಹಾಕಿದ್ದರು.
ಘಟನೆಯಿಂದ ಹೆದರಿದ್ದ ಮಹಿಳೆ ಈ ವಿಚಾರವನ್ನು ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಆದರೆ, ಇದಾದ ಬಳಿಕ ದುರುಳರು ಮೇ.14ರಂದು ಆಕೆಯನ್ನು ಮತ್ತೆ ಹಳ್ಳದ ಕಡೆ ಬರುವಂತೆ ಒತ್ತಾಯಿಸಿದ್ದರು. ಇದರಿಂದ ನೊಂದ ಮಹಿಳೆ ತುರುವಿಹಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಕುರಿತು ತಕ್ಷಣ ತಂಡ ರಚಿಸಿದ ಪೊಲೀಸರು, ದೂರು ದಾಖಲಾದ 3 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.