ರಾಯಚೂರು: ಸಿಎಂ ಯಡಿಯೂರಪ್ಪನವರೇ ನೀವು ಯಾಕೆ ತಂತಿ ಮೇಲೆ ನಡೆಯುತ್ತೀರಿ? ಸರ್ಕಾರ ನಡೆಸಲಾಗದೇ ಇದ್ದರೆ, ರಾಜೀನಾಮೆ ಕೊಡಿ. ಪಾಪ ತಂತಿ ಮೇಲೆ ನಡೆದು ಬಿದ್ದು-ಗಿದ್ದು ಹೋದಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು 105 ಜನ ಶಾಸಕರಿಂದ ಸರ್ಕಾರ ರಚಿಸಿದ್ದು, ಇದೊಂದು ಅನೈತಿಕವಾಗಿ ರಚನೆಯಾಗಿರುವ ಮೈನಾರಿಟಿ ಸರ್ಕಾರವಾಗಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳಲ್ಲೂ ಜಯ ಗಳಿಸಲಿದೆ. ಆಗ ಬಿಜೆಪಿ 113 ಸ್ಥಾನಗಳನ್ನು ತಲುಪಲಾಗದೇ, ಸರ್ಕಾರವು ಪತನವಾಗಲಿದೆ. ಹಾಗಾದಾಗ ಯಡಿಯೂರಪ್ಪನವರು ರಾಜೀನಾಮೆ ನೀಡಬೇಕಾಗುತ್ತದೆ. ಅಲ್ಲದೇ ಮಧ್ಯಂತರ ಚುನಾವಣೆ ಬರಲಿದೆ. ಉಪ ಚುನಾವಣೆಗಳಲ್ಲಿ ಯಾವತ್ತೂ ಆಡಳಿತ ಪಕ್ಷ ಗೆಲ್ಲಲು ಆಗವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಅಲ್ಲದೇ ಕಾಂಗ್ರೆಸ್ - ಜೆಡಿಎಸ್ ಪಕ್ಷ ಬಿಟ್ಟು ಹೋದವರಿಗೆ ಮಂತ್ರಿ ಸ್ಥಾನ ನೀಡುವುದಾಗಿ ಬಿಜೆಪಿಯವರು ಹೇಳಿದ್ದಾರೆ. ಆದರೆ, ಉಪ ಚುನಾವಣೆಯಲ್ಲಿ ಸೋತರೆ ಹೇಗೆ ಮಂತ್ರಿ ಸ್ಥಾನ ನೀಡಲು ಸಾಧ್ಯ? ಎಂದು ಪ್ರಶ್ನಿಸಿದರು.
ಇನ್ನು ಪ್ರಧಾನಿ ಮೋದಿಯವರು ಬೆಂಗಳೂರಿಗೆ ಚಂದ್ರಯಾನ-2 ವೀಕ್ಷಣೆಗೆ ಬಂದಿದ್ದಾಗ ಭೇಟಿ ನೀಡಲು ಅವಕಾಶ ನೀಡುವಂತೆ ಕಾಂಗ್ರೆಸ್ನಿಂದ ಪತ್ರ ಬರೆಯಲಾಗಿತ್ತು. ಪ್ರಧಾನಿಯವರೊಂದಿಗೆ ರಾಜ್ಯದಲ್ಲಿನ ನೆರೆ ಪರಿಹಾರದ ಬಗ್ಗೆ ಮಾತನಾಡಲು ನಾವು ಅವಕಾಶ ಕೋರಿದ್ದೆವು. ಆದರೆ ಪ್ರಧಾನಿಯವರು ನಮಗೆ ಅವಕಾಶವನ್ನೇ ನೀಡಲಿಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.
ಯಡಿಯೂರಪ್ಪನವರಿಗೆ ನೆರೆ ಪರಿಹಾರ ಕೇಳುವ ಧೈರ್ಯವಿಲ್ಲ. ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಲು ಹೆದರುತ್ತಾರೆ. ಯಡಿಯೂರಪ್ಪ ಅವರನ್ನ ಕಂಡರೆ ಅಯ್ಯೋ ಅನ್ನಿಸುತ್ತೆ. ಅವರಿಗೆ ಕಿರುಕುಳ ಬೇರೆ ನೀಡಲಾಗುತ್ತಿದೆ, ಅಲ್ಲದೇ ರೆಕ್ಕೆ ಪುಕ್ಕವೆಲ್ಲ ಕತ್ತರಿಸಲು ಶುರುಮಾಡಿದ್ದಾರೆ ಎಂದು ಟೀಕಿಸಿದರು.
ಇನ್ನು ಮೈಸೂರು ದಸರಾಕ್ಕೆ ತಮಗೆ ಆಹ್ವಾನವಿಲ್ಲ, ಆಹ್ವಾನ ಇಲ್ಲದ ಕಡೆ ನಾನು ಹೋಗಲ್ಲ. ಅಲ್ಲದೆ ಈ ಹಿಂದೆ ಕೂಡಾ ನಾನು ಅನೇಕ ದಸರಾಗಳನ್ನು ಮಾಡಿದ್ದೇನೆ. ಸದ್ಯ ಬಿಜೆಪಿಯವರದೇ ಸರ್ಕಾರವಿದೆ, ದಸರಾ ಮಾಡಲಿ ಎಂದು ಸಿದ್ದು ಹೇಳಿದರು.