ರಾಯಚೂರು: ನಗರದಲ್ಲಿ ಸರಬರಾಜು ಮಾಡಿದ ಕಲುಷಿತ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗಿ ಮತ್ತೋರ್ವ ವ್ಯಕ್ತಿ ಬಲಿಯಾಗಿರುವ ಆರೋಪ ಕೇಳಿ ಬಂದಿದೆ. ನಗರದ 8ನೇ ವಾರ್ಡ್‌ನ ಅಂದ್ರೂನ್ ಕಿಲ್ಲಾದ ಅಬ್ದುಲ್ ಕರೀಂ(50) ಮೃತ ವ್ಯಕ್ತಿ.
ಕಲುಷಿತ ನೀರು ಕುಡಿದು ವಾಂತಿ, ಭೇದಿಯಾಗಿ ಬಳಲುತ್ತಿದ್ದರು. ಹೀಗಾಗಿ ಕಳೆದ ಮೂರು ದಿನದ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅಲ್ಲದೇ ಕಲುಷಿತ ನೀರಿನಿಂದ ಕಿಡ್ನಿ ಮೇಲೆ ಪರಿಣಾಮ ಬೀರಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತ ವ್ಯಕ್ತಿ ಇಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಕಲುಷಿತ ನೀರು ಪೂರೈಕೆ ಆರೋಪ: ರಾಯಚೂರು ನಗರಸಭೆ ಎಇಇ ಅಮಾನತು
ಇನ್ನೂ ವಾರದ ಹಿಂದೆ ಕಲುಷಿತ ನೀರು ಕುಡಿದು 60ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಮಲ್ಲಮ್ಮ (40), ಅಬ್ದುಲ್ ಗಫೂರ್ (37), ಅರಬ್ ಮೊಹಲ್ಲಾ ಮಹ್ಮದ್ ನೂರ್ (43) ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದ್ದು, ಇದೀಗ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 4ಕ್ಕೆ ಏರಿದೆ.