ರಾಯಚೂರು: ಹಟ್ಟಿ ಚಿನ್ನದ ಗಣಿ ಕಾರ್ಮಿಕರ ವಸತಿ ಗೃಹಗಳ ಸಮುಚ್ಚಯ ಕಟ್ಟಡ ಕಾಮಗಾರಿ ಗುಣಮಟ್ಟದ ಪರಿಶೀಲನೆಗೆ ಸೂಚಿಸಲಾಗಿದೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ಹಟ್ಟಿ ಚಿನ್ನದ ಗಣಿ ಕಾರ್ಮಿಕರ ವಾಸ್ತವ್ಯಕ್ಕೆ ಸುಸಜ್ಜಿತ ಸಕಲ ಸೌಲಭ್ಯ ಹೊಂದಿದ 80 ವಸತಿ ಗೃಹಗಳ ಮೂರಂತಸ್ಥಿನ ಕಟ್ಟಡ ಕಾಮಗಾರಿಗೆ ಕಂಪನಿ ರೂ. 10 ಕೋಟಿಗೆ ಟೆಂಡರ್ ನೀಡಿದ್ದು, ಆರಂಭದಲ್ಲಿಯೇ ಕಳಪೆ ಗುಣಮಟ್ಟದ ಆರೋಪ ಕೇಳಿ ಬಂದಿದೆ.
ಬೆಂಗಳೂರು ಮೂಲದ ಸಂಸ್ಥೆಯೊಂದು ಟೆಂಡರ್ ಪಡೆದಿದ್ದು, ನಿರೀಕ್ಷಿತ ಕಂಕರ್, ಕಬ್ಬಿಣದ ಸರಳು, ಸಿಮೆಂಟ್, ಇಟ್ಟಿಗೆ ಬಳಕೆ ಮಾಡುತ್ತಿಲ್ಲ ಎಂದು ಕಂಪನಿ ಕಾರ್ಮಿಕರ ಸಂಘದ ಮುಖಂಡರು ದೂರು ಸಲ್ಲಿಸಿದ್ದರು. ಈ ಸಂಬಂಧ ಗಣಿ ಕಂಪನಿ ಅಧ್ಯಕ್ಷ ವಜ್ಜಲ್ ಪರಿಶೀಲನೆ ನಡೆಸಿದ್ದಾರೆ. ಆ ಬಳಿಕ ಮಾತನಾಡಿದ ಅವರು, ಕಟ್ಟಡ ಕಾಮಗಾರಿ ಗುಣಮಟ್ಟದ ಬಗ್ಗೆ ಸಂಶಯ ಕಂಡುಬಂದಿದೆ. ಇನ್ನೂ ಹೆಚ್ಚು ಪರಿಶೀಲಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.