ರಾಯಚೂರು: ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಬೇಸಿಗೆ ಬಂದ್ರೆ, ವಿಪರೀತ ತಾಪದಿಂದ ಜನ ಹೈರಾಣಾಗುತ್ತಾರೆ. ಬೆಳಗ್ಗೆ ಸುಮಾರು 11ಗಂಟೆಯಿಂದ ಶುರುವಾಗುವ ಬಿಸಿಲಿನ ಝಳದಿಂದ ಕಂಗಾಲಾಗಿದ್ದಾರೆ.
ಇನ್ನು ತಾಪಮಾನ ತಾಳಲಾರದೆ ಪ್ರಮುಖ ಸರ್ಕಲ್‌ಗಳಲ್ಲಿ ವಾಹನ ಸವಾರರು ಸಿಗ್ನಲ್ ಜಂಪ್ ಮಾಡುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ನಿಯಮ ಉಲ್ಲಂಘನೆ ತಡೆಯಲು ಸಂಚಾರಿ ಪೊಲೀಸರು ಹಸಿರು ಹೊದಿಕೆಯ ಪ್ಲಾನ್ ರೂಪಿಸಿದ್ದಾರೆ.
ಸಂಚಾರಿ ನಿಯಮಗಳನ್ನ ಪಾಲಿಸುವುದು ಪ್ರತಿವೋರ್ವ ವಾಹನ ಸವಾರನ ಕರ್ತವ್ಯ. ಆದರೆ ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜನರು ಜಿಲ್ಲೆಯಲ್ಲಿರುವ ಸಿಗ್ನಲ್ಗಳನ್ನು ಜಂಪ್ ಮಾಡಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಆದ್ದರಿಂದ ಇಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ಸಿಗ್ನಲ್ಗಳ ಬಳಿ ನೆರಳಿನ ವ್ಯವಸ್ಥೆ ಮಾಡಿದೆ. ನಗರದ ಬಸವೇಶ್ವರ ವೃತ್ತದ ಬಳಿಯ ಸಿಗ್ನಲ್ನ್ನ ಪ್ರಾಯೋಗಿಕವಾಗಿ ಬಳಸಿಕೊಂಡು ಅಲ್ಲಿ ಕಂಬ ಅಳವಡಿಸಿದೆ. ಅದಕ್ಕೆ ಹಸಿರು ಹೊದಿಕೆಯನ್ನು ಶೆಲ್ಟರ್(ಗುಡಿಸಲು) ರೀತಿ ಅಳವಡಿಸುವ ಮೂಲಕ ನೆರಳಿನ ವ್ಯವಸ್ಥೆಯನ್ನ ಮಾಡಲಾಗಿದೆ.
ಈ ಪ್ರಯೋಗ ಯಶಸ್ವಿಯಾದರೆ ನಗರದಲ್ಲಿನ ಅಂಬೇಡ್ಕರ್ ಸರ್ಕಲ್, ಗಂಜ್ ಸರ್ಕಲ್ ಮತ್ತು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ ಅಧಿಕಾರಿಗಳು. ಈಗಾಗಲೇ ಜಿಲ್ಲೆಯಲ್ಲಿ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದನ್ನರಿತ ರಾಯಚೂರು ಎಸ್ಪಿ ಡಾ. ಕಿಶೋರ್ ಬಾಬು ಅವರು ವಿಜಯಪುರ ಮಾದರಿಯಲ್ಲಿ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ.