ರಾಯಚೂರು : ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂದು ಗುರುತಿಸಿಕೊಂಡಿರುವ ಜಿಲ್ಲೆಗೆ ಕೇಂದ್ರ ಸರ್ಕಾರ ಐಐಐಟಿ ಮಂಜೂರು ಮಾಡಿದೆ. ಇದನ್ನು ಬರುವ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಉದ್ದೇಶಿಸಲಾಗಿತ್ತು. ಹೀಗಾಗಿ ನಗರದ ಹೊರವಲಯದ ಯರಮರಸ್ ಕ್ಯಾಂಪ್ ನಲ್ಲಿರುವ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ತರಗತಿ ಪ್ರಾರಂಭಿಸಲು ಸಿದ್ಧತೆ ಆರಂಭಿಸಲಾಗಿತ್ತು. ಆದ್ರೆ ಕೊರೊನಾ ಲಾಕ್ಡೌನ್ ನಿಂದಾಗಿ ಮುಂಬರುವ ಶೈಕ್ಷಣಿಕ ವರ್ಷದಿಂದ ಐಐಐಟಿ ಆರಂಭ ಅನುಮಾನವಾಗಿದೆ.
ಈಗಾಗಲೇ ಜಿಲ್ಲೆಯ ಐಐಐಟಿ ತರಗತಿಯನ್ನ ಹೈದರಾಬಾದ್ನಲ್ಲಿ ಆರಂಭಿಸಲಾಗಿದೆ. ಆದ್ರೆ ಬರುವ ಶೈಕ್ಷಣಿಕ ವರ್ಷದಿಂದ ರಾಯಚೂರಿನಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಹೀಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಿಂದ 2.60 ಕೋಟಿ ರೂಪಾಯಿ ಅನುದಾನದಿಂದ ಹಾಸ್ಟೆಲ್, ಕೊಠಡಿ, ಪ್ರಯೋಗಾಲಯ, ಕಂಪ್ಯೂಟರ್ ಉಪಕರಣ, ಪೀಠೋಪಕರಣಗಳು ಸೇರಿದಂತೆ ಅವಶ್ಯಕತೆ ಸಿದ್ದತೆ ಮಾಡಿಕೊಳ್ಳುವ ಪ್ರಯತ್ನವನ್ನ ಜಿಲ್ಲಾಡಳಿತ ನಡೆಸುತ್ತಿದೆ.
ಈ ಬಗ್ಗೆ ಐಐಐಟಿಗಾಗಿ ನಿಯೋಜನೆ ಮಾಡಿರುವ ನೋಡೆಲ್ ಅಧಿಕಾರಿಗಳು ಚರ್ಚೆ ಮಾಡಿದ್ದು, ಬರುವ ಆಗಸ್ಟ್ನಲ್ಲಿ ಆರಂಭಿಸಲು ಹೇಳುತ್ತಿದ್ದಾರೆ. ಹಾಗೆಯೇ ಈ ಅವಧಿಯಲ್ಲಿ ಎಲ್ಲವನ್ನ ಸಿದ್ಧತೆ ಮಾಡಿಕೊಳ್ಳುವ ಪ್ರಯತ್ನ ನಡೆಸುವುದಾಗಿ ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ.
ಹೆಮ್ಮಾರಿಯಂತೆ ಕಾಡುತ್ತಿರುವ ಕೊರೊನಾ ಸೋಂಕಿನಿಂದ ಅಭಿವೃದ್ದಿ ಕಾರ್ಯಗಳು, ದೇಶದ ಆರ್ಥಿಕತೆ ಮೇಲೆ ಕರಿನೆರಳು ಬೀರುವ ಜತೆಗೆ ಕೇಂದ್ರ ಸರ್ಕಾರ ಮಹಾತ್ವಕಾಂಕ್ಷೆಯ ಯೋಜನೆಯ ಮೇಲೆ ಸಹ ತನ್ನ ಕಾರ್ಮೋಡ ಆವರಿಸುವ ಭೀತಿ ಎದುರಾಗಿದ್ದು, ಕೊರೊನಾ ಕರಿನೆರಳು ಐಐಐಟಿ ಮೇಲೆ ಬೀಳುವ ಸಾಧ್ಯತೆಯಿರುವ ಕಾರಣ, ಬರುವ ಶೈಕ್ಷಣಿಕ ವರ್ಷದಿಂದ ಐಐಐಟಿ ಆರಂಭದ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.