ರಾಯಚೂರು: ಸ್ಪೃಶ್ಯ ಜಾತಿಗಳ ಪಟ್ಟಿಯಿಂದ ಅಸ್ಪೃಶ್ಯೇತರ ಜಾತಿಗಳ ಸೇರ್ಪಡೆ ರದ್ದುಗೊಳಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಪತ್ರ ಚಳವಳಿ ನಡೆಸಲಾಗುವುದು ಎಂದು ಕರ್ನಾಟಕ ಅಸ್ಪೃಶ್ಯ ಸಮುದಾಯ ಮಹಾಸಭಾದ ಜಿಲ್ಲಾಧ್ಯಕ್ಷ ಎಂ. ವಸಂತ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಪೃಶ್ಯ ಜಾತಿಗಳ ಪಟ್ಟಿಯಲ್ಲಿ ಅಸ್ಪೃಶ್ಯೇತರ ಜಾತಿಗಳಾದ ಭೋವಿ, ಅಣಿ, ಕೊರವ, ಕೊರಚ ಜಾತಿಗಳು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.
ಅಲ್ಲದೆ ಪರಿಶಿಷ್ಟ ಜಾತಿಯಲ್ಲಿನ ಬಹುಸಂಖ್ಯಾತ ಸಮುದಾಯಗಳಾದ ಮಾದಿಗ ಚಲುವಾದಿ ಡಕ್ಕಲಿಗ, ಸೋಮಗಸರ, ಮೋಚಿ, ಸ್ಪೃಶ್ಯ ಜಾತಿಗಳಿಗೆ ಮೀಸಲಾದ ಶೇ.15ರಷ್ಟು ಮೀಸಲಾತಿ ಪ್ರಕಾರ ವಿದ್ಯಾಭ್ಯಾಸ, ಉದ್ಯೋಗ, ರಾಜಕೀಯದಲ್ಲಿ ಅಸ್ಪೃಶ್ಯರಿಗೆ ದಕ್ಕಬೇಕಾದ ಹಕ್ಕುಗಳು ಅಸ್ಪೃಶ್ಯೇತರರ ಪಾಲಾಗಿವೆ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆ ರಾಯಚೂರು ಅಸ್ಪೃಶ್ಯ ಸಮುದಾಯಗಳ ಮಹಾಸಭಾದ ನೇತೃತ್ವದಲ್ಲಿ 10 ಲಕ್ಷ ಜನರಿಂದ ಪತ್ರ ಚಳವಳಿ ನಡೆಸುವ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಒಂದು ವಾರಗಳ ಕಾಲ ನಡೆಯುವ ಪತ್ರ ಚಳುವಳಿಯಲ್ಲಿ ಜಿಲ್ಲೆಯಿಂದ 5 ಲಕ್ಷ ಪತ್ರಗಳನ್ನು ಸಿಎಂಗೆ ಕಳುಹಿಸಲಾಗುವುದು ಎಂದಿದ್ದಾರೆ.
ರಾಜ್ಯ ಸರ್ಕಾರ ಶಾಸನಬದ್ಧ ಅಧಿಕಾರವನ್ನು ಚಲಾಯಿಸಿ ಅಸ್ಪೃಶ್ಯೇತರ ಜಾತಿಗಳನ್ನು ಸ್ಪೃಶ್ಯ ಜಾತಿಗಳ ಪಟ್ಟಿಯಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಜಿ.ಸತ್ಯನಾಥ, ಶರಣಪ್ಪ ಮ್ಯಾತ್ರಿ, ವೀರೇಶ ಯಾದವ್, ರಮೇಶ ಜಂಗ್ಲಿ, ನಾಗರಾಜ.ಬಿ ಉಪಸ್ಥಿತರಿದ್ದರು.