ರಾಯಚೂರು: ಅಕ್ರಮ ಮರಳುಗಣಿಗಾರಿಕೆ ಸಹಕಾರ ನೀಡಿದ ಆರೋಪದಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವಿಶ್ವನಾಥ್ ಹಾಗೂ ನಿಯಮ ಬಾಹಿರವಾಗಿ ಮರಳುಗಾರಿಕೆ ನಡೆಸಿದ ಗುತ್ತಿಗೆದಾರರಾದ ಆನಂದ ದೊಡ್ಡಮನಿ, ಪಿ.ಎಲ್.ಕಬಳೆ ವಿರುದ್ಧ ದೂರು ದಾಖಲಾಗಿದೆ.
ಕೃಷ್ಣಾ ನದಿಯಲ್ಲಿ ಸಾಕಷ್ಟು ಮರಳು ಲಭ್ಯವಿದೆ. ನಿಯಮದ ಪ್ರಕಾರ ಜಿಲ್ಲೆಯ ದೇವದುರ್ಗ ತಾಲೂಕಿನ ಜೋಳದಡಗಿ ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮರಳುಗಾರಿಕೆಗೆ ಅವಕಾಶವಿದೆ. 10 ಚಕ್ರದ ವಾಹನದಲ್ಲಿ ಮರಳು ಸಾಗಣಿಕೆಗೆ ಅವಕಾಶ ಕಲ್ಪಿಸಿ 14 ಮೆಟ್ರಿಕ್ ಟನ್ ಬದಲು 45 ಮೆಟ್ರಿಕ್ ಟನ್ ಮರಳು ಸಾಗಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮರಳುಗಣಿಗಾರಿಕೆಗೆ ಗುತ್ತಿಗೆ ಪಡೆದವರು ನಿಯಮದ ಪ್ರಕಾರ ಮರಳುಗಾರಿಕೆ ನಡೆಸದೆ ಅಕ್ರಮವಾಗಿ ಮರಳುಗಾರಿಕೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಗುತ್ತಿಗೆದಾರರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಅಕ್ರಮ ಮರಳುಗಾರಿಕೆಗೆ ಸಹಕಾರ ನೀಡಿದ್ದಾರೆಂದು ಶರಣಪ್ಪರೆಡ್ಡಿ ಎಂಬುವವರು ದೇವದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.