ಲಿಂಗಸುಗೂರು: ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಮ್ಯಾದರಗಡ್ಡಿ ಸಂಪೂರ್ಣ ಜಲಾವೃತವಾಗಿದೆ. ಅಧಿಕಾರಿಗಳು ನಡೆಸುತ್ತಿರುವ ಸ್ಥಳಾಂತರ ಕಾರ್ಯಕ್ಕೆ ಸಂತ್ರಸ್ತ ಕುಟುಂಬಗಳು ವಿರೋಧ ವ್ಯಕ್ತಪಡಿಸಿವೆ.
ನಾರಾಯಣಪುರ ಅಣೆಕಟ್ಟೆಯಿಂದ 2.50 ಲಕ್ಷ ಕ್ಯುಸೆಕ್ ನೀರು ಹರಿಬಿಟ್ಟಿದ್ದು, ಮ್ಯಾದರಗಡ್ಡಿ, ಕರಕಲಗಡ್ಡಿ ವೆಂಕಮ್ಮನಗಡ್ಡಿ ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿನ ನಿವಾಸಿಗಳ ರಕ್ಷಣೆಗೆ ತಾಲೂಕು ಆಡಳಿತ ಹರಸಾಹಸ ಪಡುತ್ತಿದೆ.
ಲಿಂಗಸುಗೂರು ತಾಲೂಕಿನ ಯರಗೋಡಿ ಬಳಿ ನದಿ ದಡದಿಂದ ಬೋಟ್ ಮೂಲಕ ಸಂತ್ರಸ್ತರನ್ನು ಕರೆ ತರಲು ಹೋಗಿದ್ದ ಡಿವೈಎಸ್ಪಿ ಎಸ್.ಎಸ್. ಹುಲ್ಲೂರು ನೇತೃತ್ವ ತಂಡ, ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅವರಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿಸಿದರು. ಈ ವೇಳೆ ನಡುಗಡ್ಟೆಯಲ್ಲಿ ಸಿಲುಕಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ದೇವಮ್ಮ ಮಾತನಾಡಿ, ಪರ್ಯಾಯ ವ್ಯವಸ್ಥೆ ಮಾಡಿದ ನಂತರವೇ ಬರುತ್ತೇವೆ. ಒಂದು ಹೊತ್ತಿನ ಗಂಜಿಗೆ ಗ್ರಾಮವನ್ನು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.