ರಾಯಚೂರು : 2018ರ ಅ.5ರಂದು ಅನುಮಾಸ್ಪದ ವಸ್ತು ಸ್ಫೋಟಗೊಂಡು, ವರ್ಷದ ಬಳಿಕ ಇದೀಗ ಪರೀಕ್ಷೆಗೊಳಪಡಿಸಿದಾಗ ಆ ವಸ್ತು ಮತ್ತೆ ಸ್ಫೋಟಗೊಂಡು ಆರು ಜನ ತಜ್ಞರು ಗಾಯಗೊಂಡಿದ್ದು, ರಸಾಯನಿಕ ವಸ್ತುವಿನ ಬಗ್ಗೆ ಸಂಶಯ ವ್ಯಕ್ತವಾಗಿದೆ.
ನಗರದ ಹೊರವಲಯದ ಯರಮರಸ್‌ನ ಪಾರಸ್‌ವಾಟಿಕಾ ಬಡಾವಣೆ ಬಳಿ 2018ರ ಅ.5ರಂದು ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಮಗು ದಂಪತಿ ಗಾಯಗೊಂಡಿದ್ದರು. ಈ ಪೈಕಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಳು. ಮೃತಳನ್ನು ಅನಂತಮ್ಮ (35), ಗಂಡ ಲಕ್ಷ್ಮಣ ಹಾಗೂ ಪುತ್ರ ರಾಮು ಎಂದು ಗುರುತಿಸಲಾಗಿತ್ತು. ಸ್ಫೋಟಗೊಂಡ ವಸ್ತುವನ್ನ ಪರಿಶೀಲನೆ ನಡೆಸಿದಾಗ ರಸಾಯನಿಕ ಮಿಥೈಲ್ ಇಥೇನಾಲ್ ಥರ್ಮಾಕಾಲ್ ಪೆರಾಕ್ಸೆಡ್ ರಾಸಾಯನಿಕ ಮಿಶ್ರಣ ಇದೆ ಎಂಬುದು ಪತ್ತೆಯಾಗಿತ್ತು.
ಸಪ್ಲೈಯರ್ ಅಂಗಡಿಯವರು ಡೆಕೋರೇಷನ್‌ಗಾಗಿ ಅದನ್ನು ಉಪಯೋಗ ಮಾಡಿ, ರಾಸಾಯನಿಕ ಡಬ್ಬಿಯನ್ನು ನಿರ್ಲಕ್ಷದಿಂದ ಬಿಸಾಡಿದ್ದರಿಂದ ಸ್ಫೋಟಗೊಂಡಿದೆ ಎಂದು ಹೇಳಲಾಗಿತ್ತು. ಘಟನೆ ಹಿನ್ನೆಲೆಯಲ್ಲಿ ಯರಮರಸ್‌ನ ಗಜಾನನ ಡೆಕೋರೇಟರ್ಸ್ ಮಾಲೀಕರಾದ ಧೀರೇಂದ್ರ ಜೋಷಿ, ಅರುಣ ಜೋಷಿ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಘಟನಾ ಸ್ಥಳದಲ್ಲಿ ದೊರೆತ ಪೇಸ್ಟ್‌ನಂತಹ ಪದಾರ್ಥವಿದ್ದ ಡಬ್ಬಿಯ ಮೇಲೆ ಎಎಸ್‌ಎಂ ಕಂಪನಿ ಎಂದು ಹೆಸರಿದ್ದು, ಹೈದರಾಬಾದ್‌ನ ಬಾಲಾಜಿ ಎಂಟರ್‌ಪ್ರೈಸೆಸ್‌ನಿಂದ ಖರೀದಿಸಲಾಗಿತ್ತು ಎಂದು ತನಿಖೆ ವೇಳೆ ಬಯಲಾಗಿತ್ತು.
2018ರ ಅ.6ರಂದು ಕಲಬುರಗಿಯ ಎಫ್ಎಸ್‌ಎಲ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪ್ಲಾಸ್ಟಿಕ್ ಕ್ಯಾನ್‌ನಲ್ಲಿದ್ದ ಸ್ಲಾಬ್ ಮತ್ತು ಪೇಸ್ಟ್‌ನಂತಹ ಪದಾರ್ಥ ಸೇರಿದಂತೆ ಒಟ್ಟು 62 ವಸ್ತುಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಎಫ್ಎಸ್‌ಎಲ್ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇದೀಗ ಘಟನೆ ನಡೆದು ವರ್ಷದ ಬಳಿಕ ಪರೀಕ್ಷೆಗೆ ರವಾನಿಸಿದ ರಸಾಯನಿಕ ವಸ್ತು ಸ್ಪೋಟಗೊಂಡು ಆರು ಜನ ತಜ್ಞರು ಗಾಯಗೊಂಡಿರುವುದರಿಂದ ರಸಾಯನಿಕ ವಸ್ತುವಿನ ಬಗ್ಗೆ ಸಂಶಯ ವ್ಯಕ್ತವಾಗಿದೆ.