ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಮಹಿಳೆಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ನಗರದ ರಿಮ್ಸ್ನ ನಿರ್ದೇಶಕ ಬಸವರಾಜ ಪೀರಾಪುರ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕ್ಷಯರೋಗ ಹಾಗೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ 28 ವರ್ಷದ ಮಹಿಳೆ ಮಂಗಳವಾರ ಮೃತಪಟ್ಟಿದ್ದಾಳೆ. ಮೃತ ಮಹಿಳೆ ಬೀದರ್ನಿಂದ ನಗರಕ್ಕೆ ಕಳೆದ ಮೇ 25ರಂದು ಆಗಮಿಸಿದ್ದಳು. ಅಲ್ಲಿಂದ ಬಳಿಕ ಮೇ 30ರಂದು ರಿಮ್ಸ್ಗೆ ದಾಖಲಾಗಿದ್ದಳು.
ಕೊರೊನಾ ಸೋಂಕಿನ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಜೂ. 2ರಂದು ಗಂಟಲು ದ್ರವವನ್ನ ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದಾದ ಬಳಿಕ ಜೂ. 3ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಕಳೆದ ಫೆ. 23ರಂದು ರಿಮ್ಸ್ಗೆ ಆಗಮಿಸಿ ಕ್ಷಯರೋಗ ಕಾಯಿಲೆಗೆ ಚಿಕಿತ್ಸೆ ಸಹ ಪಡೆದಿದ್ದರು. ಹಾಗಾಗಿ ಮಹಿಳೆಯ ಸಾವು ಕೊರೊನಾ ಸೋಂಕಿನಿಂದಲೇ ಆಗಿದೆ ಎಂದು ಈಗಲೇ ಹೇಳಲಾಗದು. ಈ ಬಗ್ಗೆ ವರದಿಯನ್ನು ಜಿಲ್ಲಾ ವೈದ್ಯರ ಟಾಸ್ಕ್ಫೋರ್ಸ್ ಸಮಿತಿಯಿಂದ ಪಡೆಯಲಾಗುತ್ತದೆ. ವರದಿ ಬಂದ ಬಳಿಕ ಬಹಿರಂಗಗೊಳಿಸಲಾಗುವುದು ಎಂದರು.
ಇದೇ ವೇಳೆ ದೇವದುರ್ಗ ತಾಲೂಕಿನ ಗರ್ಭಿಣಿಯ ಗರ್ಭಪಾತ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ರಿಮ್ಸ್ ನಿರ್ದೇಶಕ ಬಸವರಾಜ ಪೀರಾಪುರ್, ಮೇ 6ರಂದು ಗರ್ಭಿಣಿಗೆ ಚಿಕಿತ್ಸೆ ನೀಡಿ, ಮಾತ್ರೆ ನೀಡಲಾಗಿತ್ತು. ಮೇ 8ರಂದು ರಕ್ತ ಸ್ರಾವವಾಗುತ್ತಿರುವ ಬಗ್ಗೆ ಒಬಿಜಿ ವಿಭಾಗಕ್ಕೆ ಮಾಹಿತಿ ನೀಡಲಾಗಿತ್ತು. ಈ ಮಾಹಿತಿ ಮೇರೆಗೆ ತಪಾಸಣೆ ಮಾಡಿದಾಗ ಹಿಮೋಗ್ಲೋಬಿನ್ ಕಡಿಮೆ ಇರುವುದು ತಿಳಿದುಬಂದಿತ್ತು. ಹಾಗಾಗಿ ಒಂದು ಬಾಟಲಿ ರಕ್ತ ಸಹ ನೀಡಲಾಗಿತ್ತು ಎಂದು ತಪಾಸಣೆ ಕುರಿತು ವಿವರಣೆ ನೀಡಿದರು.
ವೈದ್ಯರು ಸ್ಥಳಕ್ಕೆ ಬರಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮಾಹಿತಿ ಬಂದ ಬಳಿಕ ವೈದ್ಯರು ತೆರಳಿದ್ದಾರೆ ಎಂದರು.
ಗರ್ಭಿಣಿಯ ಗರ್ಭಪಾತಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಗರ್ಭಿಣಿಗೆ ವೈದ್ಯರು ಮೊದಲಿಂದಲೇ ಚಿಕಿತ್ಸೆ ನೀಡುತ್ತ ಬಂದಿದ್ದರು. ಆದರೆ, ಸಂವಹನ ಕೊರತೆಯಿಂದ ಈ ಸಮಸ್ಯೆ ಆಗಿರಬಹುದು. ಈ ಆರೋಪದ ಕುರಿತಂತೆ ವೈದ್ಯರ ಟಾಸ್ಕ್ಫೋರ್ಸ್ ಸಮಿತಿಯಿಂದ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.