ರಾಯಚೂರು : ಜಿಲ್ಲೆಯಲ್ಲಿ ಏರ್ಪೋರ್ಟ್ ನಿರ್ಮಿಸಬೇಕೆಂದು ಹಲವು ವರ್ಷಗಳಿಂದ ಬೇಡಿಕೆಯಿದೆ. ಆದರೆ, ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದರು ಅನ್ನೋ ಗಾದೆ ಮಾತಿನಂತೆ, ಸರ್ಕಾರದಿಂದ ಅಧಿಕೃತ ಆದೇಶ ಬರುವ ಮುನ್ನವೇ ವಿಮಾನ ನಿಲ್ದಾಣಕ್ಕೆ ಹೆಸರಿಡುವ ವಿಚಾರವಾಗಿ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿದೆ.
1957ರಲ್ಲಿ ಅಂದಿನ ಪ್ರಧಾನಿಯಾಗಿದ್ದ ದಿ.ಜವಾಹರಲಾಲ್ ನೆಹರೂ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿದ ಹಿನ್ನೆಲೆ ರಾಯಚೂರು ಹೊರವಲಯದ ಯರಮರಸ್ ಗ್ರಾಮದ ಬಳಿ ತುರ್ತು ಭೂಸ್ಪರ್ಶ ಮಾಡಿತ್ತು. ಈ ಕಾರಣಕ್ಕೆ ಆ ಸ್ಥಳದಲ್ಲಿ ಏರ್ಪೋರ್ಟ್ ನಿರ್ಮಿಸಲು ನಿರ್ಧರಿಸಲಾಯಿತು. ಅಲ್ಲದೆ, ಸರ್ಕಾರವು ರೈತರಿಂದ ಅಂದಾಜು 400 ಎಕರೆ ಭೂಮಿಯನ್ನು ಖರೀದಿಸಿದೆ.
ಆದರೆ, ಈವರೆಗೆ ಏರ್ಪೋರ್ಟ್ ಮಾತ್ರ ನಿರ್ಮಾಣವಾಗಿರಲಿಲ್ಲ. ಆದರೀಗ, ಏರ್ಪೋರ್ಟ್ ನಿರ್ಮಾಣಕ್ಕೆ ಭೂ ಸರ್ವೆ ಕಾರ್ಯ, ಸ್ಥಳ ಪರಿಶೀಲನೆ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಸುಮಾರು 48 ಕೋಟಿ ರೂ. ಅನುದಾನ ನೀಡಲು ಸಮ್ಮತಿ ನೀಡಲಾಗಿದೆ. ಇಷ್ಟೆಲ್ಲಾ ನಡೀತಿದ್ರೂ, ಸರ್ಕಾರದಿಂದ ಮಾತ್ರ ಈವರೆಗೆ ಅಧಿಕೃತ ಆದೇಶ ಬಂದಿಲ್ಲ.
ಇತ್ತೀಚೆಗೆ ನಡೆದ ರಾಯಚೂರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿಮಾನ ನಿಲ್ದಾಣಕ್ಕೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಹೆಸರನ್ನಿಡಲು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ವೇಳೆ ಓರ್ವ ಸದಸ್ಯರೊಬ್ಬರು ದಿ.ಜವಾರಲಾಲ್ ನೆಹರು ಹೆಸರಿಡಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ರು. ಅಲ್ಲದೆ ಏಗನೂರು ಗ್ರಾಮದ ಹಲವು ರೈತರು ಭೂಮಿ ನೀಡಿರುವುದರಿಂದ ಏಗನೂರು ಗ್ರಾಮದ ಹೆಸರಿಡಬೇಕು ಎಂದು ಏಗನೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತಿರ್ಮಾನಿಸಲಾಗಿದೆ.
ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ರಾಯಚೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಿ ಜನತೆ ಲೋಹದ ಹಕ್ಕಿಯಲ್ಲಿ ಪಯಣಿಸಬೇಕಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು.