ಮೈಸೂರು: ರಾಜಕೀಯವಾಗಿ ಸಿದ್ದರಾಮಯ್ಯ ಒಳ್ಳೆಯ ವ್ಯಕ್ತಿ. ಆದರೆ, ಕಾಂಗ್ರೆಸ್ ತಾಲಿಬಾನ್ ಜೊತೆ ಬೆಳೆದ ಪಕ್ಷ. ಹಾಗಾಗಿ, ತಾಲಿಬಾನ್ ಸಂಸ್ಕೃತಿ ಆ ಪಕ್ಷಕ್ಕಿದೆ ಎಂದು ಅರಣ್ಯ, ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಅಶೋಕಪುರಂನಲ್ಲಿರುವ ಅರಣ್ಯಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಇರುವ ಪಕ್ಷ ತಾಲಿಬಾನ್ ಸಂಸ್ಕೃತಿ ಇರುವ ಪಕ್ಷ. ಸಿದ್ದರಾಮಯ್ಯ ಅಲ್ಲ. ಆದರೆ, ಅವರು ಪಕ್ಷದಲ್ಲಿರುವುದರಿಂದ ಹಾಗೆ ಮಾತನಾಡುತ್ತಾರೆ ಎಂದರು.
ದೀಪಾವಳಿ ನಂತರ ಹೊಸ ಕಾರ್ಡ್ ವಿತರಣೆ:
2.44 ಲಕ್ಷ ಬಿಪಿಎಲ್ ಕಾಡ್೯ಗಳನ್ನು ದೀಪಾವಳಿ ನಂತರ ವಿತರಣೆ ಮಾಡಲಾಗುವುದು. ಬಿಪಿಎಲ್ ಕಾಡ್೯ ಪಡೆಯಲು ಮಾನದಂಡ ಮೀರಿರುವ 2.50 ಲಕ್ಷ ಕಾಡ್೯ಗಳನ್ನು ತೆಗೆಯಲಾಗುವುದು. ಸರ್ಕಾರಿ ನೌಕರರು ಬಿಪಿಎಲ್ ಕಾಡ್೯ ಪಡೆದಿದ್ದರೆ ಕ್ರಿಮಿನಲ್ ಕೇಸ್ ಹಾಕಿಸಲಾಗುವುದು ಎಂದು ತಿಳಿಸಿದರು.
5 ಕೆ.ಜಿ ಅಕ್ಕಿ ಸಾಕು:
ಬಿಪಿಎಲ್ ಕಾಡ್೯ ಹೊಂದಿರುವ ಪ್ರತಿಯೊಬ್ಬ ಸದಸ್ಯನಿಗೆ 5 ಕೆಜಿ ಅಕ್ಕಿ ಸಾಕು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 7 ಕೆಜಿ ಕೊಡುತ್ತಿದ್ದರು. ಆದರೆ, ಮುಂದೆ ಚುನಾವಣೆಗೆ ಹೋಗಬೇಕಾಗಿರುವುದರಿಂದ 10 ಕೆಜಿ ಅಕ್ಕಿ ಕೊಡುತ್ತೇನೆ ಎನ್ನುತ್ತಿದ್ದಾರೆ ಎಂದರು.
ಮಾನವ ಹಾಗೂ ಪ್ರಾಣಿ ಸಂಘರ್ಷ ತಪ್ಪಿಸಲು ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಇಲಾಖೆಯಲ್ಲಿ ನೇಮಕಾತಿ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದು ಸಚಿವ ಕತ್ತಿ ತಿಳಿಸಿದರು.
ಇದನ್ನೂ ಓದಿ: ಮಾತೃಪಕ್ಷದ ವಿರುದ್ಧ ಮಾತನಾಡುವುದು ತೀರಾ ಹಾಸ್ಯಾಸ್ಪದ: ಸಿದ್ದರಾಮಯ್ಯಗೆ ಸಂಸದ ಪ್ರಜ್ವಲ್ ರೇವಣ್ಣ ತರಾಟೆ