ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡರ ಗೆಲುವು, ಕಾಂಗ್ರೆಸ್ ಗೆಲುವಲ್ಲ. ಅದು ಅವರ ವೈಯಕ್ತಿಕ ಗೆಲುವು. ಆರು ತಿಂಗಳ ಹಿಂದೆಯೇ ಅಭ್ಯರ್ಥಿ ಘೋಷಣೆ ಮಾಡಲಾಗಿತ್ತು. ಮಧು ಮಾದೇಗೌಡರು ಅವರ ಸಂಸ್ಥೆಯ ನೌಕರರನ್ನು ಬಳಸಿಕೊಂಡು ಚೆನ್ನಾಗಿ ಕೆಲಸ ಮಾಡಿದರು. ಎಂಎಲ್ಸಿ ಮರಿತಿಬ್ಬೆಗೌಡ ಅವರು ಕಾಂಗ್ರೆಸ್ಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದರು. ಇದೆಲ್ಲದರ ಪರಿಣಾಮ ಕಾಂಗ್ರೆಸ್ ಗೆದ್ದಿದೆ ಅಷ್ಟೇ, ಸಿದ್ದರಾಮಯ್ಯ ಅವರು ಜಂಬದ ಸೊಕ್ಕಿನ ಮಾತುಗಳನ್ನು ಆಡುವುದನ್ನು ಬಿಡಬೇಕು ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
2016ರಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು, ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರವೀಂದ್ರ ಕೇವಲ ಆರು ಸಾವಿರ ಮತಗಳನ್ನು ಮಾತ್ರ ತೆಗೆದುಕೊಂಡಿದ್ದರು. ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಪಿಂಕ್ ನೋಟ್ ಹಂಚಿ ಗೆದ್ದು, ಈಗ ಸಿದ್ದರಾಮಯ್ಯ ನಾನೇ ಜಗದೇಕ ವೀರ ಅಂತ ಇದ್ದಾರೆ. ನನ್ನ ಅಣ್ಣನನ್ನು ಗೆಲ್ಲಿಸಲು ಆಗಲಿಲ್ಲ ಅನ್ನೋ ನೋವು ನನಗೂ ಕೂಡ ಇದೆ. ಎಲ್ಲಿ ತೊಂದರೆಯಾಗಿದೆ ಅನ್ನೋದರ ಬಗ್ಗೆ ಪರಾಮರ್ಶೆ ಮಾಡುತ್ತೇವೆ ಎಂದರು.
ತಪ್ಪು ಮಾಡಿಲ್ಲ ಎನ್ನುವುದಾದರೆ ಸುಮ್ಮನಿರಿ: ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ನೀವು ತಪ್ಪು ಮಾಡಿಲ್ಲ ಎನ್ನುವುದಾದರೆ ಸುಮ್ಮನಿರಿ. ಕಾನೂನಿಗಿಂತ ನೀವು ದೊಡ್ಡವರಾ? ಎಂದು ಪ್ರಶ್ನಿಸಿದರು. ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಮೋದಿ ಅವರ ಮೇಲೂ ಕೂಡ ಕೇಸ್ ಹಾಕಲಾಗಿತ್ತು. ಅಮಿತ್ ಶಾ ಅವರನ್ನು ಕೂಡ ಕಟಕಟೆಗೆ ತಂದು ನಿಲ್ಲಿಸಲಾಗಿತ್ತು. ಅವರೆಲ್ಲರೂ ಕಾನೂನಾತ್ಮಕವಾಗಿ ವಿಚಾರಣೆ ಎದುರಿಸಿ ಹೊರಬಂದಿಲ್ವಾ?. ಅವರು ತಪ್ಪು ಮಾಡಿಲ್ಲ ಅಂದ್ರೆ ವಿಚಾರಣೆ ಎದುರಿಸಿ ಹೊರಬರಲಿ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಜಾತಿನಿಂದನೆ ದೂರು ನೀಡಿದ ಛಲವಾದಿ ನಾರಾಯಣಸ್ವಾಮಿ