ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಘಟಿಕೋತ್ಸವದಲ್ಲಿ ಮೂವರು ವಿದ್ಯಾರ್ಥಿನಿಯರು ಅತಿ ಹೆಚ್ಚು ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಯಾರು ಆ ವಿದ್ಯಾರ್ಥಿನಿಯರು ಹಾಗೂ ಯಾವೆಲ್ಲಾ ಕ್ಷೇತ್ರಗಳಲ್ಲಿ ಪದಕಗಳನ್ನು ಪಡೆದಿದ್ದಾರೆ ಎಂಬುದರ ಡಿಟೇಲ್ಸ್ ಇಲ್ಲಿದೆ.
ಇಂದು ಕ್ರಾಫರ್ಡ್ ಹಾಲ್ ನಲ್ಲಿ ನಡೆದ ಮೈಸೂರು ವಿವಿಯ ಶತಮಾನೋತ್ಸವ ಘಟಿಕೋತ್ಸವದಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ಅತಿ ಹೆಚ್ಚು ಚಿನ್ನದ ಪದಕ ಹಾಗೂ ಬಹುಮಾನವನ್ನು ನೀಡಲಾಯಿತು. ಎಂಎಸ್ಸಿ ರಸಾಯನಶಾಸ್ತ್ರದಲ್ಲಿ ಆರ್. ರೂಪಿಣಿ ಎಂಬ ವಿದ್ಯಾರ್ಥಿನಿಗೆ 11 ಚಿನ್ನದ ಪದಕ, 2 ನಗದು ಬಹುಮಾನ, ಎಂಎ ಅರ್ಥಶಾಸ್ತ್ರದಲ್ಲಿ ಆರ್. ಧನಲಕ್ಷ್ಮೀ ಎಂಬ ವಿದ್ಯಾರ್ಥಿನಿಗೆ 9 ಚಿನ್ನದ ಪದಕ, 4 ನಗದು ಬಹುಮಾನ ಹಾಗೂ ಎಂಎಸ್ಸಿ ಸಸ್ಯಶಾಸ್ತ್ರದಲ್ಲಿ ಎಂ.ಜೆ. ಶಾಲಿನಿ ಎಂಬ ವಿದ್ಯಾರ್ಥಿನಿಗೆ 7 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಲಭಿಸಿದೆ.
ಆರ್. ರೂಪಿಣಿ ಅವರಿಗೆ 11 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ದೊರೆಕಿದೆ. ಇವರ ಪೋಷಕರು ಬಾಡಿಗೆ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸಕ್ಕೆ ಬೆಂಬಲ ನೀಡಿದ್ದು, ತಮ್ಮ ಸಾಧನೆಗೆ ಪೋಷಕರು ಹಾಗೂ ಉಪನ್ಯಾಸಕರೇ ಕಾರಣ ಎಂದಿದ್ದಾರೆ. ಪಿಹೆಚ್ಡಿ ಮುಗಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲೇ ಉಪನ್ಯಾಸಕಿಯಾಗಬೇಕು ಎಂಬ ಗುರಿ ಹೊಂದಿದ್ದೇನೆ ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು 9 ಚಿನ್ನದ ಪದಕ ಪಡೆದ ಆರ್. ಧನಲಕ್ಷ್ಮಿ, ಮರಿಮಲ್ಲಪ್ಪ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಗಂಗೋತ್ರಿಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಓದುವುದನ್ನು ಗಂಭೀರವಾಗಿ ಪರಿಗಣಿಸಿದ್ದೆ ಗೆಲುವಿಗೆ ಕಾರಣವಂತೆ. ಹಾಗೇ ಇವರ ಈ ಸಾಧನೆಗೆ ಪೋಷಕರ ಸಹಕಾರ ಅಪಾರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
7 ಚಿನ್ನದ ಪದಕ ಪಡೆದ ಎಂ. ಜೆ. ಶಾಲಿನಿ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೃಗವಧೆ ಎಂಬ ಪುಟ್ಟ ಗ್ರಾಮದವರು. ಅಪ್ಪ ರೈತರಾದರೂ ಓದಿಗೆ ಅವರೇ ಸ್ಫೂರ್ತಿಯಂತೆ. ಹೀಗಾಗಿ, ಸಸ್ಯಶಾಸ್ತ್ರವನ್ನು ಆಯ್ಕೆಮಾಡಿಕೊಂಡು, ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸದೊಂದಿಗೆ ಪಿಹೆಚ್ಡಿ ಮಾಡಿದ್ದು, ಸದ್ಯ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಬಗ್ಗೆ ಶಾಲಿನಿ ಮಾತನಾಡಿ, 7 ಚಿನ್ನದ ಪದಕ ಗಳಿಸಿರುವುದು ಬಹಳ ಸಂತೋಷವನ್ನುಂಟು ಮಾಡಿದೆ. ಮಗಳು ಗೋಲ್ಡ್ ಮೆಡಲಿಸ್ಟ್ ಎಂಬ ವಿಚಾರ ಮನೆಯವರಿಗೂ ತುಂಬಾ ಖುಷಿ ತಂದಿದೆ ಎಂದು ಹರ್ಷವ್ಯಕ್ತಪಡಿಸಿದರು.