ಮೈಸೂರು : ಕಟ್ಟಡ ತ್ಯಾಜ್ಯ ಇನ್ಮುಂದೆ ವೇಸ್ಟ್ ಅಲ್ಲ. ಅದನ್ನು ಮರು ಬಳಕೆ ಮಾಡಬಹುದು ಎಂಬುದನ್ನ ತೋರಿಸಿ ಕೊಟ್ಟಿದ್ದಾರೆ ಮೈಸೂರಿನ ಆರ್ಕಿಟೆಕ್ಟ್ ರಾಜೇಶ್. ಕಟ್ಟಡ ತ್ಯಾಜ್ಯಗಳನ್ನು ಮರು ಬಳಕೆ ಮಾಡಬಹುದು ಎಂಬುದನ್ನ ತೋರಿಸುವ ಮೂಲಕ, ಕೇಂದ್ರ ಸರ್ಕಾರ ವಿಧಿಸಿರುವ 2022 ಸ್ವಚ್ಛ ಸರ್ವೇಕ್ಷಣೆಯ ಮಾನದಂಡವನ್ನ ಮಾಡಿ ತೋರಿಸಿದ್ದಾರೆ.
ಕಟ್ಟಡ ತ್ಯಾಜ್ಯ ಕಸ ಎಂದು ಬಿಸಾಕಿದರೆ ಅದು ಸ್ವಚ್ಛತೆಗೆ ಮತ್ತೊಂದು ಸಮಸ್ಯೆಯಾಗುತ್ತದೆ. ಕೇಂದ್ರ ಸರ್ಕಾರ ಕಟ್ಟಡ ತ್ಯಾಜ್ಯಗಳನ್ನ ಶೇ.50ರಷ್ಟು ಮರು ಬಳಕೆ ಮಾಡಬೇಕೆಂದು ಹೇಳಿದೆ. 2022ರ ಸ್ವಚ್ಛ ಸರ್ವೇಕ್ಷಣೆಗೆ ವಿಧಿಸಿರುವ ಮಾನದಂಡಗಳಲ್ಲಿ ಇದು ಒಂದಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಮಹಾನಗರ ಪಾಲಿಕೆ ಕಟ್ಟಡ ತ್ಯಾಜ್ಯವನ್ನು ಮರುಬಳಕೆ ಮಾಡಿ ತಯಾರಾದ ಮಾದರಿ ವಸ್ತುಗಳಿಂದ ತಡೆಗೋಡೆ ನಿರ್ಮಾಣ ಮಾಡಿದೆ.
ಬನ್ನಿ ಮಂಟಪದ ಬಳಿಯ ಜೋಡಿ ತೆಂಗಿನ ಮರದ ಸ್ಮಶಾನದಲ್ಲಿರುವ ಶಿಥಿಲಾವಸ್ಥೆಗೊಂಡ ತಡೆಗೋಡೆ ಕುಸಿದು ಬಿದ್ದಿತ್ತು. ಆ ತಡೆಗೋಡೆಯನ್ನ ಕಟ್ಟಡ ತ್ಯಾಜ್ಯದಿಂದ ಮರು ಬಳಕೆ ಮಾಡಿ ತಯಾರಾದ ವಸ್ತುಗಳಿಂದ ಸುಮಾರು ಹತ್ತು ಅಡಿ ಎತ್ತರ, ನೂರು ಅಡಿ ಉದ್ದದ ತಡೆಗೋಡೆಯನ್ನ ಪಾಲಿಕೆ ಆರ್ಕಿಟೆಕ್ಟ್ ರಾಜೇಶ್ ಅವರ ಪ್ರಯತ್ನದ ಮೂಲಕ ತಡೆಗೋಡೆ ನಿರ್ಮಿಸಿದ್ದಾರೆ.
ಈ ತಡೆಗೋಡೆ ನಿರ್ಮಾಣಕ್ಕೆ ಪಿಡಬ್ಲ್ಯೂಡಿ 4 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ಹೇಳಿದ್ದರು. ಆದರೆ, ಕಟ್ಟಡ ತ್ಯಾಜ್ಯದಿಂದ ಮರುಬಳಕೆಯಾದ ವಸ್ತುಗಳಿಂದ ತಡೆಗೋಡೆಯನ್ನ 2 ಲಕ್ಷ ರೂಪಾಯಿಗೆ ನಿರ್ಮಾಣ ಮಾಡಲಾಗಿದೆ. ಆ ಮೂಲಕ ಶೇ.50ರಷ್ಟು ಖರ್ಚು ಕಡಿಮೆಯಾಗಿದೆ.
ಇನ್ನೂ ಆರ್ಕಿಟೆಕ್ಟ್ ರಾಜೇಶ್ ಹೇಳುವ ಪ್ರಕಾರ ಕಟ್ಟಡ ತ್ಯಾಜ್ಯದ ಮರು ಬಳಕೆಯಿಂದ ತಯಾರಾದ ವಸ್ತುಗಳಿಂದ ಪರಿಸರ ಸ್ನೇಹಿ ಮನೆ ಸೇರಿದಂತೆ ತಡೆಗೋಡೆಗಳು, ಫುಟ್‌ಪಾತ್ ಮೇಲೆ ಹಾಕುವ ಟೈಲ್ಸ್‌ಗಳನ್ನು ಸಹ ತಯಾರಿಸಬಹುದಾಗಿದೆ. ಖರ್ಚು ಸಹ ಕಡಿಮೆಯಾಗಲಿದೆ.
ಇನ್ಮುಂದೆ ಕಡಿಮೆ ವೆಚ್ಚದಲ್ಲಿ ಮನೆಗಳನ್ನ ಸಹ ನಿರ್ಮಾಣ ಮಾಡಬಹುದಾಗಿದೆ ಎಂದು ಈ ತಂತ್ರಜ್ಞಾನದ ಬಗ್ಗೆ ಹಾಗೂ ಇದನ್ನು ಉಪಯೋಗಿಸುವುದರಿಂದ ಆಗುವ ಲಾಭದ ಜೊತೆಗೆ ಸ್ವಚ್ಛ ಸರ್ವೇಕ್ಷಣೆಯ ಮಾನದಂಡವನ್ನು ಸಹ ಅನುಸರಿಸುವಂತಾಗುತ್ತದೆ. ಆ ಮೂಲಕ ಮತ್ತೊಮ್ಮೆ ಮೈಸೂರು ನಗರವನ್ನ ಸ್ವಚ್ಛ ನಗರಿ ಮಾಡಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ರಾಜೇಶ್.
ಪರಿಸರ ಸ್ನೇಹಿ ಮನೆಗಳ ನಿರ್ಮಾಣಕ್ಕೆ ಸಹಕಾರಿ : ಈ ಕಟ್ಟಡ ತ್ಯಾಜ್ಯಗಳಿಂದ ಮನೆ ನಿರ್ಮಾಣ ಮಾಡುವುದರಿಂದ ಸುಸ್ಥಿರ ಪರಿಸರವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಮನೆಗಳ ತ್ಯಾಜ್ಯಗಳ ಮರು ಬಳಕೆಯಿಂದ ಕಸವನ್ನು ಕಡಿಮೆ ಮಾಡಬಹುದು ಎಂದು ರಾಜೇಶ್ ಹೇಳಿದರು.