ಮೈಸೂರು: ಕೆಡಿಪಿ ಸಭೆಗೆ ಹಾಜರಾಗದೆ ಇನ್ನೊಂದು ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಿದ ಲೊಕೋಪಯೋಗಿ ಅಧಿಕಾರಿಗಳನ್ನು ವಾಪಾಸ್ ಕಳುಹಿಸಿಕೊಡುವಂತೆ ಸಚಿವ ವಿ.ಸೋಮಣ್ಣ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳರಿಗೆ ಸಭೆಯಿಂದಲೇ ಕರೆ ಮಾಡಿ ಕೇಳಿಕೊಂಡ ಪ್ರಸಂಗ ನಡೆಯಿತು.
ಹೊಸ ವರ್ಷದ ನಂತರ ಮೊದಲ ಕೆಡಿಪಿ ಸಭೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ಸಭೆಗೆ ಜಿಲ್ಲೆಯ ಹಾಗೂ ಮೈಸೂರು ನಗರದ ಎಲ್ಲಾ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಆದರೆ ಸಭೆಗೆ ಜಿಲ್ಲೆಯ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಭಾಗವಹಿಸಿರಲಿಲ್ಲ. ಈ ಬಗ್ಗೆ ಮಾಹಿತಿ ತಿಳಿದ ಸಚಿವ ವಿ.ಸೋಮಣ್ಣ, ಪಿಡಬ್ಲ್ಯೂಡಿ ಅಧಿಕಾರಿಗಳು ಎಲ್ಲಿ ಎಂದು ಕೇಳಿದಾಗ ಅವರು ಬೆಂಗಳೂರು ಸಭೆಗೆ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಸಚಿವ ಸೋಮಣ್ಣ ತಕ್ಷಣ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರಿಗೆ ಸಭೆಯಿಂದಲೇ ಕರೆ ಮಾಡಿ ನಾನು ಮೈಸೂರಿನಲ್ಲಿ ಕೆಡಿಪಿ ಸಭೆ ನಡೆಸುತ್ತಿದ್ದೇನೆ, ನಿಮ್ಮ ಇಲಾಖೆಯ ಅಧಿಕಾರಿಗಳು ಬೆಂಗಳೂರು ಸಭೆಗೆ ಹೋದರೆ ಹೇಗೆ. ನಾನು ಸಂಜೆಯವರೆಗೆ ಇಲ್ಲಿ ಸಭೆ ನಡೆಸುತ್ತೇನೆ, ತಕ್ಷಣ ಅಧಿಕಾರಿಗಳನ್ನು ವಾಪಾಸ್ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ.