ಮೈಸೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ತಮ್ಮ ಸ್ವಕ್ಷೇತ್ರವಾದ ವರುಣಾಗೆ ಜೂನ್ 10ರಂದು (ನಾಳೆ) ಆಗಮಿಸುತ್ತಿದ್ದಾರೆ. ಈ ವೇಳೆ ತಮ್ಮ ಕ್ಷೇತ್ರದ ಮತದಾರರ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. 2023ರ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ರೋಚಕವಾಗಿ ಗೆದ್ದ ಸಿದ್ದರಾಮಯ್ಯ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಸಿಎಂ ಆದ ನಂತರ ಇದೇ ಮೊದಲ ಬಾರಿಗೆ ತಮ್ಮ ತವರು ಜಿಲ್ಲೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ನಾಳೆ ನೇರವಾಗಿ ಮುಖ್ಯಮಂತ್ರಿ ಅವರು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ನಲ್ಲಿ ಸುತ್ತೂರಿನ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ.
ಕೃತಜ್ಞತಾ ಸಮಾವೇಶದಲ್ಲಿ ಭಾಗಿ ಸಿಎಂ: ಸಿದ್ದರಾಮಯ್ಯ ವರುಣಾ ಕ್ಷೇತ್ರದ ಬಿಳಿಗೆರೆಯಲ್ಲಿ ನಡೆಯಲಿರುವ ಕೃತಜ್ಞತಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಿದ್ದರಾಮಯ್ಯರನ್ನು ತಮ್ಮ ಕೊನೆಯ ಚುನಾವಣೆಯಲ್ಲಿ ಗೆಲ್ಲಿಸಿದ ಕ್ಷೇತ್ರದ ಜನರಿಗೆ ಧನ್ಯವಾದ ಅರ್ಪಿಸಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಪ್ರತಿಸ್ಪರ್ಧಿ ಬಿಜೆಪಿಯ ವಿ.ಸೋಮಣ್ಣ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತಾದರೂ ಕೊನೆಯಲ್ಲಿ ಸಿದ್ದರಾಮಯ್ಯ 46,006 ಮತಗಳ ಭಾರಿ ಅಂತರದಿಂದ ಗೆದ್ದಿದ್ದರು.
ಜೊತೆಗೆ ವರುಣಾ ಕ್ಷೇತ್ರ ಸಿದ್ದರಾಮಯ್ಯ ಅವರ ಲಕ್ಕಿ ಕ್ಷೇತ್ರವೂ ಆಗಿದ್ದು, ಅದರಂತೆ ಈ ಬಾರಿಯ ಪ್ರಬಲ ಗೆಲುವಿನ ನಂತರ ರಾಜ್ಯದ ಮುಖ್ಯಮಂತ್ರಿ ಸಹ ಆದರು. ಆದ್ದರಿಂದ ತಮ್ಮನ್ನು ಬಹುಮತದಿಂದ ಮತ್ತು ಭಾರಿ ಮತಗಳ ಅಂತರದಿಂದ ಗೆಲ್ಲಿಸಿ ಕ್ಷೇತ್ರದ ಜನತೆಗೆ ಸಿದ್ದರಾಮಯ್ಯ ಈ ಕೃತಘ್ನತಾ ಸಮಾವೇಶದಲ್ಲಿ ಧನ್ಯವಾದ ಅರ್ಪಿಸಲಿದ್ದಾರೆ.
ಇದನ್ನೂ ಓದಿ: Congress Guarantees: ಗ್ಯಾರಂಟಿ ಯೋಜನೆಗಳ ಷರತ್ತಿನಲ್ಲಿ ಗೊಂದಲ; ಸದನದಲ್ಲಿ ಹೋರಾಟಕ್ಕೆ ಅಣಿಯಾದ ಬಿಜೆಪಿ
ಮೈಸೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಲಿರುವ ಸಿದ್ದರಾಮಯ್ಯ: ಬೆಂಗಳೂರಿನಿಂದ ಹೆಲಿಕಾಪ್ಟರ್ನಲ್ಲಿ ವರುಣಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸುತ್ತೂರಿನ ಹೆಲಿಪ್ಯಾಡ್ಗೆ ಆಗಮಿಸುವ ಸಿಎಂ ಸಿದ್ದರಾಮಯ್ಯ, ನಂತರ ಬಿಳಿಗೆರೆ ಗ್ರಾಮದಲ್ಲಿ ಮತದಾರರ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ, ಬಳಿಕ ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ನಂತರ, ಸಂಜೆ 4 ಗಂಟೆಗೆ ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಬಳಿಕ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಭಾನುವಾರ ಬೆಳಿಗ್ಗೆ ಮೈಸೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ: 2018ರಲ್ಲಿ ಸಿದ್ದರಾಮಯ್ಯ ಉದ್ಘಾಟಿಸಿದ್ದ ಮೈಸೂರು ಡಿಸಿ ಕಚೇರಿ ಕಟ್ಟಡದಲ್ಲಿ ಇಂದಿನಿಂದ ಜಿಲ್ಲಾಡಳಿತದ ಕಾರ್ಯಭಾರ
ಎರಡನೇ ಬಾರಿಗೆ ಸಿಎಂ ಆದ ಬಳಿಕ ಸ್ವಕ್ಷೇತ್ರ ವರುಣಾಗೆ ಆಗಮಿಸುತ್ತಿರುವ ಸಿದ್ದರಾಮಯ್ಯನವರ ಸ್ವಾಗತಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಇದರ ಜೊತೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಎರಡನೇ ಬಾರಿಗೆ ಮಹಾದೇವಪ್ಪ ಆಯ್ಕೆಯಾಗಿದ್ದು, ನಾಳೆ ನಡೆಯಲಿರುವ ಸಿಎಂ ಕಾರ್ಯಕ್ರಮಗಳು ಉಸ್ತುವಾರಿ ಸಚಿವರ ನೇತೃತ್ವದಲ್ಲೇ ನಡೆಯಲಿದೆ.
ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಗೆ ಮನೆಯೊಡತಿಯ ಮಗನ ತೆರಿಗೆ ಪಾವತಿ ಪರಿಗಣಿಸುವುದಿಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್