ಮೈಸೂರು : ಶರನ್ನವರಾತ್ರಿಯ ಕೊನೆಯ ದಿನವಾದ ಇಂದು ರಾಜವಂಶಸ್ಥರು ವಿಜಯದಶಮಿಯನ್ನು ಆಚರಿಸಿ ಶರನ್ನವರಾತ್ರಿಯನ್ನು ಪೂರ್ಣಗೊಳಿಸಿದರು. ವಿಜಯದಶಮಿಯ ನಿಮಿತ್ತ ಅರಮನೆಯಲ್ಲಿ ಇಂದು ಬೆಳಗ್ಗೆ ದೇವರ ಪೂಜೆ ಸಲ್ಲಿಸಿದ ಮಹಾರಾಜರು ಬಳಿಕ ಆನೆ ಬಾಗಿಲಿಗೆ ಬಂದ ಪಟ್ಟದ ಆನೆ, ಕುದುರೆ, ಹಸು, ಒಂಟೆಗಳಿಗೆ ಪೂಜೆ ಸಲ್ಲಿಸಿದರು. ನಂತರ ಸವಾರಿ ತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗಕ್ಕೆ ಚಾಲನೆ ಕೊಟ್ಟರು.
ಶಮಿ ಪೂಜೆ ನೆರವೇರಿಸಿದ ಯದುವೀರ್ : ಬಳಿಕ ಯದುವೀರ್ ಆನೆ ಬಾಗಿಲಿನ ಮೂಲಕ ವಿಜಯದಶಮಿಯ ಮೆರವಣಿಗೆ ನಡೆಸಿದರು. ಚಿನ್ನದ ಪಲ್ಲಕ್ಕಿಯಲ್ಲಿ ಯುದ್ಧದ ಆಯುಧಗಳನ್ನಿಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ ಯದುವೀರ್ ಭುವನೇಶ್ವರಿ ದೇವಾಲಯದದ ಆವರಣದಲ್ಲಿರುವ ಬನ್ನಿ ಮರಕ್ಕೆ ಶಮಿ ಪೂಜೆ ನೆರವೇರಿಸಿದರು. ಬಳಿಕ ವಾಪಾಸ್ ಅರಮನೆಗೆ ಹೋರಾಟ ಮಹಾರಾಜರು ಅಲ್ಲಿ ಪೂಜೆ ಸಲ್ಲಿಸಿ ಕಂಕಣ ವಿಸರ್ಜನೆ ಮಾಡಿದರು.
ಜಟ್ಟಿಗಳ ವಜ್ರ ಮುಷ್ಟಿ ಕಾಳಗ : ಶರನ್ನವರಾತ್ರಿಯ ಕೊನೆಯದಿನ ಅರಮನೆಯ ಸವಾರಿ ತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ನಡೆಯಿತು. ಅರಮನೆಗೆ ಆಗಮಿಸಿದ ಉಸ್ತಾದ್, ದಶನಂದಿ ಹಾಗೂ ಪೈಲ್ವಾನರು ಈ ಬಾರಿ ವಜ್ರಮುಷ್ಠಿ ಕಾಳಗ ನಡೆಸಲು ರಾಜಮಾತೆಯಿಂದ ಅನುಮತಿ ಪಡೆದರು. ಬಳಿಕ ಸವಾರಿ ತೊಟ್ಟಿಯು ಮೈಸೂರು , ಚಾಮರಾಜನಗರ, ಚನ್ನಪಟ್ಟಣ ಮತ್ತು ಬೆಂಗಳೂರಿನ ಜಟ್ಟಿಗಳ ವಜ್ರಮುಷ್ಠಿ ಕಾಳಗಕ್ಕೆ ಸಜ್ಜಾಯಿತು.
ಅದರಲ್ಲಿಯೂ ಈ ಬಾರಿ ಚಾಮರಾಜನಗರದ ಅಚ್ಚುತ ಜಟ್ಟಿ ಹಾಗೂ ಚನ್ನಪಟ್ಟಣದ ಮನೋಜ್ ಜಟ್ಟಿ ನಡುವೆ ವಜ್ರಮುಷ್ಠಿ ಕಾಳಗ ಹಾಗೂ ಮೈಸೂರಿನ ವಿಷ್ಣು ಬಾಲಾಜಿ ಜಟ್ಟಿ ಹಾಗೂ ಬೆಂಗಳೂರಿನ ತಾರಾನಾಥ ಜಟ್ಟಿ ನಡುವೆ ವಜ್ರಮುಷ್ಠಿ ಕಾಳಗ ನಡೆಯಿತು. ಈ ಕಾಳಗಕ್ಕೆ ಮಹಾರಾಜರು ಅನುಮತಿ ನೀಡಿದ ಬಳಿಕ ಕೆಲವೇ ಸೆಕೆಂಡ್ ಗಳಲ್ಲಿ ವಜ್ರಮುಷ್ಠಿ ಕಾಳಗದಲ್ಲಿ ಚಾಮರಾಜನಗರ ಅಚ್ಚುತ ಜೆಟ್ಟಿ ತಲೆಯಲ್ಲಿ ರಕ್ತ ಚಿಮ್ಮಿತು. ಈ ಮೂಲಕ ಕಾಳಗ ಸಮಾಪ್ತಿಗೊಂಡಿತು.
ಇದನ್ನೂ ಓದಿ : ಅದ್ಧೂರಿಯಾಗಿ ನೆರವೇರಿದ ಜಂಬೂ ಸವಾರಿ: ಬನ್ನಿಮಂಟಪದ ಪಂಜಿನ ಕವಾಯತಿನಿಂದ ಕಾರ್ಯಕ್ರಮಕ್ಕೆ ತೆರೆ