ಮೈಸೂರು: ಸಂಕಷ್ಟದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಉಳಿಸಲು ಸಚಿವ ಸಾ.ರಾ.ಮಹೇಶ್ ತಮ್ಮ ಮೈಸೂರಿನ ಸ್ವ ಗೃಹದಲ್ಲೇ ಕುಳಿತು ತಂತ್ರ ಹೆಣೆಯುತ್ತಿದ್ದು, ಮಾಧ್ಯಮದವರನ್ನು ದೂರ ಇಟ್ಟಿದ್ದಾರೆ.
ಕುಮಾರಸ್ವಾಮಿ ಆಪ್ತ ಸಚಿವರಲ್ಲಿ ಒಬ್ಬರಾದ ಸಚಿವ ಸಾ.ರಾ.ಮಹೇಶ್ ಕಳೆದ ರಾತ್ರಿಯೇ ನಗರದ ಡಿ.ಸುಬ್ಬಯ್ಯ ರಸ್ತೆಯಲ್ಲಿರುವ ಮನೆಗೆ ಆಗಮಿಸಿ, ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲದೆ ಇದೇ ವೇಳೆ ಕೆಲವು ಬಿಜೆಪಿ ನಾಯಕರನ್ನು ಸಂಪರ್ಕಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಕೆಲವು ಅಧಿಕಾರಿಗಳು ಮನೆಗೆ ಬಂದು ಸಚಿವರನ್ನು ಭೇಟಿ ಮಾಡಿ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಅವರ ಮನೆಯ ಮುಂದೆ ಬಂದ ಮಾಧ್ಯಮದ ಪ್ರತಿನಿಧಿಗಳಿಗೆ ಸಚಿವರು ಮನೆಯಲ್ಲಿ ಇಲ್ಲ ಎಂದು ಹೇಳಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಆದರೆ ಸಚಿವ ಸಾ.ರಾ.ಮಹೇಶ್ ಕಳೆದ 20 ದಿನಗಳಿಂದ ನಿದ್ದೆ ಮಾಡಿಲ್ಲ. ಆದ್ದರಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.