ಮೈಸೂರು: ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಕೊಲೆ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ರನ್ನು ಈ ಹಿಂದೆ ಬಂಧಿಸಲಾಗಿದ್ದು, ಈ ಸುಪಾರಿಗೆ ಐಡಿಯಾ ಕೊಟ್ಟಿದ್ದಾರೆ ಎನ್ನಲಾದ ನಿರ್ಮಾಪಕ ಸಿದ್ದರಾಜು ಎಂಬಾತನನ್ನು ನಾಲ್ಕನೇ ಆರೋಪಿಯಾಗಿ ಪೊಲೀಸರು ಬಂಧಿಸಿದ್ದಾರೆ.
ವಿಶ್ವನಾಥ್ ಹಾಗೂ ಪರಶಿವಮೂರ್ತಿ ಮಧ್ಯೆ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಅದಲ್ಲದೆ ವಿಶ್ವನಾಥ್ ಅವರಿಗೆ ಸಂಸ್ಕೃತ ಶಾಲೆ ನಡೆಸುತ್ತಿದ್ದ ಕೊಲೆಯಾದ ಪರಶಿವಮೂರ್ತಿ ಅವಮಾನ ಮಾಡಿದ್ದರಂತೆ. ಹಾಗಾಗಿ ಅವರನ್ನು ಸುಪಾರಿ ನೀಡಿ ಹತ್ಯೆ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಮೈಸೂರಿನ ಸರಸ್ವತಿಪುರಂ ಪೊಲೀಸರು ವಿಶ್ವನಾಥ್ ಭಟ್ರನ್ನು ಬಂಧಿಸಿದ್ದು, ಇದೀಗ ಈ ಕೊಲೆಗೆ ಸುಪಾರಿ ನೀಡುವ ಐಡಿಯಾ ಹಾಗೂ ಸುಪಾರಿ ಕಿಲ್ಲರ್ನನ್ನು ಪರಿಚಯ ಮಾಡಿಸಿಕೊಟ್ಟ ಸಿದ್ದರಾಜು ಎಂಬಾತನನ್ನು ನಾಲ್ಕನೇ ಆರೋಪಿಯಾಗಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಿರ್ಮಾಪಕ ಸಿದ್ದರಾಜು ಸಾರೋಟ್ ಎಂಬ ಕನ್ನಡ ಸಿನಿಮಾಕ್ಕೆ ಬಂಡವಾಳ ಹಾಕಿದ್ದು, ಈ ಚಿತ್ರದಲ್ಲಿ ಈತನ ಪುತ್ರ ಕಿರಣ್ ಹೀರೋ ಆಗಿ ನಟಿಸಿದ್ದಾನೆ. ಈ ಚಿತ್ರ ಏಪ್ರಿಲ್ ತಿಂಗಳ ಹೊತ್ತಿಗೆ ಬಿಡುಗಡೆಗೆ ಸಿದ್ಧವಾಗಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಮುಂದೆ ಹೋಗಿತ್ತು.