ಮೈಸೂರು: ಸೆಪ್ಟಂಬರ್ 29ರಂದು ಬೆಳಿಗ್ಗೆ 9:29ರಿಂದ 10:25ರವರೆಗಿನ ವೃಚ್ಚಿಕ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಾಹಿತಿ ಎಸ್.ಎಲ್.ಭೈರಪ್ಪನವರು ನಾಡಹಬ್ಬ ದಸರಾಗೆ ಚಾಲನೆ ನೀಡಲಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 24 ಗಂಟೆಗಳ ಕಾಲ ಸಹಾಯವಾಣಿಯನ್ನು ಆರಂಭಿಸಲಾಗುವುದು. ಬೇರೆ ಕಡೆಯಿಂದ ಬರುವ ಎಲ್ಲ ಕಲಾವಿದರಿಗೂ ಮೂಲ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ನೀಡುವುದು, ನಗರದ ರಸ್ತೆ ದುರಸ್ತಿ ಹಾಗೂ ವಿದ್ಯುತ್ ಸೌಲಭ್ಯದ ಬಗ್ಗೆ ಸೂಕ್ತ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಅಕ್ಟೋಬರ್ 8ರ ವಿಜಯ ದಶಮಿ ದಿನದಂದು 2:15ರಿಂದ 2:48ರವರೆಗೆ ಮಕರ ಲಗ್ನದಲ್ಲಿ ಸಿಎಂ ಯಡಿಯೂರಪ್ಪನವರು ನಂದಿಗೆ ಪೂಜೆ ಸಲ್ಲಿಸಲಿದ್ದು, ಸಂಜೆ 4:31ರಿಂದ 4:52ರವರೆಗಿನ ಶುಭ ಕುಂಭ ಲಗ್ನದಲ್ಲಿ ಸಿಎಂ ಹಾಗೂ ಇತರ ಗಣ್ಯರು ಜಂಬೂ ಸವಾರಿಗೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ ಎಂದು ಸಚಿವ ಸೋಮಣ್ಣ ತಿಳಿಸಿದರು.
ನಾಡ ಹಬ್ಬ ದಸರಾದಲ್ಲಿ ಯಾವುದೇ ಕುಂದುಕೊರತೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು. ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲು ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ. ಗಣ್ಯರಿಗೆ ಖುದ್ದಾಗಿ ನಾನೇ ಆಹ್ವಾನ ಕೊಡಲು ತೀರ್ಮಾನಿಸಿದ್ದೇನೆ ಎಂದರು.