ಮೈಸೂರು: ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳ ವಿಚಾರಣೆಗಾಗಿ ಮೈಸೂರಿನ ಸ್ಥಾಪಿಸಲಾದ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ವಿಶೇಷ ತ್ವರಿತಗತಿ ನ್ಯಾಯಾಲಯವು ಭಾರತದ ಎರಡನೇ ತ್ವರಿತ ತೀರ್ಪು ನೀಡಿದೆ. ಇದು ಕರ್ನಾಟಕದ ಮೊಟ್ಟ ಮೊದಲ ಅತಿ ವೇಗವಾಗಿ ಹೊರಬಂದ ತೀರ್ಪಾಗಿದೆ. ಆರೋಪಕ್ಕೆ ಸಂಬಂಧಸಿದಂತೆ ಸಾಕ್ಷಿಗಳ ವಿಚಾರಣೆ, ವಾದ, ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಐದು ದಿನಗಳ ಅವಧಿಯಲ್ಲಿ ತೀರ್ಪು ಪ್ರಕಟಿಸಿದೆ.
2021ರಲ್ಲಿ ಬಿಹಾರದ ಅರಾರಿಯಾ ಪೋಕ್ಸೋ ನ್ಯಾಯಾಲಯವು ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯೊಬ್ಬನಿಗೆ ಕೇವಲ ಒಂದೇ ದಿನದಲ್ಲಿ ವಿಚಾರಣೆ ನಡೆಸಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಮೈಸೂರಿನ ಪೋಕ್ಸೋ ತ್ವರಿತ ನ್ಯಾಯಾಲಯ ಕೇವಲ ಐದು ದಿನಗಳಲ್ಲಿ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳಿಸಿ, ತೀರ್ಪು ಕೊಟ್ಟಿದೆ. ಇದೇ ಆ.1ರಂದು ಪ್ರಕರಣ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಂದೇ ವಿಚಾರಣೆ ಪ್ರಕ್ರಿಯೆಗೂ ಚಾಲನೆ ನೀಡಲಾಯಿತು. ಆ.2 ಮತ್ತು 3ರಂದು ಸಾಕ್ಷಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಆ.4ರಂದು ವಾದ ಮತ್ತು ಪ್ರತಿವಾದ ಆಲಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ ಕಾಮ್ರೋಜ್ ಅವರು ಆ.5 ರಂದು ತೀರ್ಪು ನೀಡಿದ್ದಾರೆ.
ವಿಜಯನಗರ ಪೊಲೀಸರು 17 ವರ್ಷದ 11 ತಿಂಗಳ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಅಡಿಯಲ್ಲಿ 23 ವರ್ಷದ ಯುವಕನ (ಪೋಕ್ಸೋ ಪ್ರಕರಣದವಾದ ಹಿನ್ನೆಲೆಯಲ್ಲಿ ಆರೋಪಿ ಹಾಗೂ ಸಂತ್ರಸ್ಥೆ ಹೆಸರಿನಲ್ಲಿ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ) ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ''ತನ್ನ ಮೇಲೆ ಒಂದೆರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯು ತನ್ನ ಗ್ರಾಮದಲ್ಲಿ ಮದುವೆಯಾಗಿ ಮೈಸೂರಿಗೆ ಕರೆ ತಂದಿದ್ದಾನೆ'' ಎಂದು ಈ ಪ್ರಕರಣದ ಸಂತ್ರಸ್ತೆಯು ಪೊಲೀಸರಿಗೆ ದೂರು ನೀಡಿದ್ದಳು.
''ಮದುವೆ ನಂತರ, ಇಬ್ಬರು ಒಟ್ಟಾಗಿ ದಾಂಪತ್ಯ ಜೀವನ ನಡೆಸುತ್ತಿದ್ದೆವು. ಈ ನಡುವೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು'' ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದಳು. ಆರೋಪಿ ಮನೆಯಲ್ಲಿ ಇಲ್ಲದೇ ಇದ್ದಾಗ ಈಕೆ ಆತನನ್ನು ಹೆದರಿಸಲು ಹೇರ್‌ಡೈ ಸೇವಿಸಿದ್ದಳು. ಇದರಿಂದ ಕೆಲವೇ ನಿಮಿಷಗಳಲ್ಲಿ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ನೋವಿನಿಂದ ನರಳುತ್ತಿದ್ದ ಆಕೆಯನ್ನು ಆರೋಪಿಯು ಆಸ್ಪತ್ರೆಗೆ ದಾಖಲಿಸಿದ್ದ.
ಆಕೆ ಅಪ್ರಾಪ್ತೆ ಆದ ಹಿನ್ನೆಲೆಯಲ್ಲಿ ಪೊಲೀಸರು, ಆಸ್ಪತ್ರೆಯಲ್ಲಿ ಬಾಲಕಿಯ ಹೇಳಿಕೆ ದಾಲಿಸಿಕೊಂಡಿದ್ದರು. ಬಳಿಕ ಎಫ್‌ಐಆರ್ ಮಾಡಿ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪ್ರಕರಣದ ಸತ್ಯಾಸತ್ಯತೆ ಪರಿಗಣಿಸಿ, ಸಿಆರ್ಪಿಸಿ (ಸಂತ್ರಸ್ತೆಗೆ ಪರಿಹಾರ) ಸೆಕ್ಷನ್ ೩೫೭-ಎ(೩) ಅಡಿ ಯಾವುದೇ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ತೀರ್ಪು ನೀಡಿತು.
ಸಿಆರ್ಪಿಸಿ (ಜಾಮೀನು)ಯು/ಸೆಕ್ಷನ್ 437-ಎ ಅಡಿ ಆರೋಪಿಯು, 50 ಸಾವಿರ ರೂ.ಗಳ ವೈಯಕ್ತಿಕ ಬಾಂಡ್ ಪಾವತಿಸಬೇಕೆಂದು ಆದೇಶಿಸಿದ ನ್ಯಾಯಾಧೀಶರು, ಆರೋಪಿಯನ್ನು ಖುಲಾಸೆಗೊಳಿಸಿದರು. ಆರೋಪಿ ಪರವಾಗಿ ಮೈಸೂರಿನ ಮುಖ್ಯ ಕಾನೂನು ನೆರವು ರಕ್ಷಣಾ ವಕೀಲ ಎಂ.ಎಸ್.ನವೀನ್ ಮಾಚಂಗಡ ವಾದ ಮಂಡಿಸಿದರು.
ಇದನ್ನೂ ಓದಿ: ತನ್ನೊಂದಿಗೆ ಲೈಂಗಿಕತೆಯಿಂದ ದೂರವಿದ್ದ ಪತಿ ಮತ್ತೋರ್ವನ ತೆಕ್ಕೆಯಲ್ಲಿ.. ಬೆಂಗಳೂರಲ್ಲಿ ಗಂಡನ ವಿರುದ್ಧ ಪತ್ನಿ ದೂರು