ಮೈಸೂರು: ವೈಭವದ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆ ಹಾಗೂ ಅಶ್ವದಳಕ್ಕೆ ಮೊದಲ ಹಂತದ ಕುಶಾಲತೋಪು ತಾಲೀಮನ್ನು ಇಂದು ವಸ್ತು ಪ್ರದರ್ಶನ ಆವರಣದಲ್ಲಿ ನಡೆಸಲಾಯಿತು.
ಅರಮನೆ ಮುಂಭಾಗದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಗರ ಶಸ್ತ್ರಾಸ್ತ್ರ ಮೀಸಲು ಪಡೆ ಸಿಬ್ಬಂದಿ ಫಿರಂಗಿ ಗಾಡಿಗಳನ್ನು ತಂದು ತಾಲೀಮ ಕೈಗೊಂಡರು. ಅಭಿಮನ್ಯು ನೇತೃತ್ವದ ಗಜಪಡೆ ಸೇರಿ 14 ಆನೆಗಳು, 43 ಅಶ್ವದಳ ಭಾಗಿಯಾಗಿದ್ದವು. ಪೊಲೀಸರು, ಅಶ್ವಾರೋಹಿ ದಳ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇದರಲ್ಲಿದ್ದರು. ಇಂದು ಮೊದಲ ತಾಲೀಮು ಮಗಿದಿದ್ದು ಇನ್ನೆರಡು ಬಾರಿ ಕುಶಾಲತೋಪು ತಾಲೀಮು ಬಾಕಿ ಇದೆ.
ಕುಶಾಲತೋಪು ತಾಲೀಮಿನ ನೇತೃತ್ವ ವಹಿಸಿರುವ ಅಶೋಕ್ ಕುಮಾರ್ ಮಾತನಾಡಿ, ಮೊದಲ ಹಂತದಲ್ಲಿ 43 ಕುದುರೆಗಳು, 14 ಆನೆಗಳು ತಾಲೀಮಿನಲ್ಲಿ ಭಾಗವಹಿಸಿದ್ದವು. ಎರಡನೇ ಹಂತದ ತಾಲೀಮು ಅಕ್ಟೋಬರ್ 13ರಂದು, ಮೂರನೇ ಹಂತದ ತಾಲೀಮು ಅಕ್ಟೋಬರ್ 16 ರಂದು ನಡೆಯಲಿದೆ. ಮೊದಲ ಹಂತದ ತಾಲೀಮಿನಲ್ಲಿ 32 ಸಿಬ್ಬಂದಿ ಭಾಗವಹಿಸಿದ್ದರು. ಮೊದಲ ಹಂತದ ತಾಲೀಮಿನಲ್ಲಿ ಕಡಿಮೆ ಪ್ರಮಾಣದ ಸಿಡಿಮದ್ದು ಬಳಸಿ ತರಬೇತಿ ನೀಡಲಾಗಿದೆ. ಇದಾದ ನಂತರ ಎರಡನೇ ಹಂತ ಹಾಗೂ ಮೂರನೇ ಹಂತದ ತಾಲೀಮಿನಲ್ಲಿ ಹೆಚ್ಚು ಪ್ರಮಾಣದ ಸಿಡಿಮದ್ದುಗಳ ಬಳಸಿ, ಹೆಚ್ಚಿನ ಶಬ್ದಕ್ಕೆ ಗಜಪಡೆಗಳು ಹಾಗೂ ಅಶ್ವಪಡೆಗಳಿಗೆ ತರಬೇತಿ ನೀಡಲಾಗುವುದು. ಬಳಿಕ ಜಂಬೂಸವಾರಿಯ ದಿನ ಕುಶಾಲತೋಪು ಸಿಡಿಸುವ ಶಬ್ದಕ್ಕೆ ಹೆದರದಂತೆ ಸಿದ್ದಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಿಸಿಎಫ್ ಸೌರವ್ ಕುಮಾರ್, ಗಜಪಡೆಗಳು ಆರೋಗ್ಯವಾಗಿದ್ದು, ಪ್ರತಿನಿತ್ಯ ಆರೋಗ್ಯ ತಪಾಸಣೆಯನ್ನು ವೈದ್ಯರು ನಡೆಸುತ್ತಿದ್ದಾರೆ. ಜಂಬೂಸವಾರಿ ಮೆರವಣಿಗೆಗೆ ಈಗಾಗಲೇ ಮರದ ಅಂಬಾರಿ ತಾಲೀಮು ನಡೆಸಲಾಗುತ್ತಿದೆ. ಇಂದು ಮೊದಲ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಆರಂಭಿಸಿದ್ದೇವೆ. ಮತ್ತೆ ಇನ್ನೆರಡು ಬಾರಿ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಗುವುದು ಎಂದರು.
10 ಕಡೆ ಕಾರ್ಯಕ್ರಮಗಳು: ಈ ಬಾರಿಯ ದಸರಾ ಉತ್ಸವಕ್ಕೆ 10 ಕಡೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಮುಖ್ಯವಾಗಿ, ಅಂಬಾವಿಲಾಸ ಅರಮನೆಯ ಮುಂಭಾಗದ ಸಾಂಸ್ಕೃತಿಕ ವೇದಿಕೆ ಸೇರಿದಂತೆ ನಗರದ ಕಲಾಮಂದಿರ, ನಾದಬ್ರಹ್ಮ ಸಂಗೀತಾ ಸಭಾ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಆವರಣ, ಜಗನ್ಮೋಹನ ಅರಮನೆ, ಗಾನಭಾರತಿ, ಚಿಕ್ಕ ಗಡಿಯಾರ ಆವರಣದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ: ಮೈಸೂರು ದಸರಾ: 10 ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು- ಸಂಪೂರ್ಣ ವಿವರ..