ಮೈಸೂರು : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಣೆಯಾಗಿದೆ. ವರನಟ ರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಅವರಿಗೆ ಒಂದೇ ವಯಸ್ಸಿನಲ್ಲಿ ಗೌರವ ಡಾಕ್ಟರೇಟ್ ದೊರೆತ್ತಿರುವುದು ವಿಶೇಷ ಹಾಗೂ ಕಾಕತಾಳೀಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಜಿ. ಹೇಮಂತ್ ಕುಮಾರ್ ಅವರು ಈಟಿವಿ ಭಾರತ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮಾರ್ಚ್ 22ರಂದು 102ನೇ ಘಟಿಕೋತ್ಸವ ಸಮಾರಂಭ ನಡೆಯುತ್ತಿದೆ. ವಿಶೇಷವಾಗಿ ಈ ಬಾರಿ ಘಟಿಕೋತ್ಸವದಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಅನ್ನು ಘೋಷಣೆ ಮಾಡಲಾಗಿದೆ. ಇದೇ ಮೈಸೂರು ವಿವಿ ಯಿಂದ ವರನಟ ರಾಜ್ ಕುಮಾರ್ ಅವರಿಗೂ ಸಹ 1976ರಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿತ್ತು.
ತಂದೆ-ಮಗನಿಗೆ ಒಂದೇ ವಯಸ್ಸಿಗೆ ಒಂದೇ ವಿವಿಯಿಂದ ಗೌರವ ಡಾಕ್ಟರೇಟ್ : ಆದರೆ, ಕಾಕತಾಳೀಯ ಎಂಬಂತೆ ರಾಜ್ ಕುಮಾರ್ ಅವರಿಗೂ ಅವರ 49ನೇ ವಯಸ್ಸಿನಲ್ಲಿ ಡಾಕ್ಟರೇಟ್ ನೀಡಿದ್ದು, ಪುನೀತ್ ರಾಜ್‍ಕುಮಾರ್ ಅವರಗೂ ಸಹ 49ನೇ ವರ್ಷಕ್ಕೆ ಡಾಕ್ಟರೇಟ್ ನೀಡುತ್ತಿರುವುದರ ಜೊತೆಗೆ ತಂದೆ-ಮಗನಿಗೆ ಡಾಕ್ಟರೇಟ್ ನೀಡುತ್ತಿರುವುದು ನಮ್ಮ ಮೈಸೂರು ವಿವಿ ಎಂದು ಕುಲಪತಿಗಳಾದ ಪ್ರೊ. ಜಿ. ಹೇಮಂತ್‌ಕುಮಾರ್ ಅವರು ತಿಳಿಸಿದರು.
ಮಾರ್ಚ್ 22ರಂದು ನಡೆಯುವ ಘಟಿಕೋತ್ಸವದಲ್ಲಿ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಅನ್ನು ಪುನೀತ್ ರಾಜ್‍ಕುಮಾರ್ ಅವರಿಗೆ ನೀಡಲಾಗುತ್ತಿದೆ. ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಪ್ರಶಸ್ತಿ ಸ್ವೀಕರಿಸಲು ಆಹ್ವಾನ ನೀಡಲಾಗಿದೆ ಎಂದರು.
ಪುನೀತ್ ರಾಜ್‍ಕುಮಾರ್ ಅವರಿಗೆ ಅನೇಕ ಸಂಘ-ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ಅವರು ಬದುಕಿದ್ದಾಗ ಗೌರವ ಡಾಕ್ಟರೇಟ್ ಹಾಗೂ ಪ್ರಶಸ್ತಿ ಪುರಸ್ಕಾರಗಳನ್ನು ನೀಡುತ್ತೇವೆ ಎಂದರೂ ಪುನೀತ್ ಅವರು ನಾನು ಅಂತಹ ದೊಡ್ಡ ಸಾಧನೆ ಮಾಡಿಲ್ಲ ಎಂದು ಹೇಳಿ ಪ್ರಶಸ್ತಿ- ಪುರಸ್ಕಾರಗಳಿಂದ ಅವರು ದೂರ ಉಳಿಯುತ್ತಿದ್ದರು ಎಂದು ಆಹ್ವಾನ ನೀಡಲು ಹೋದಾಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತಿಳಿಸಿದರು ಎಂದು ಕುಲಪತಿಯವರು ಹೇಳಿದರು.
ಪುನೀತ್ ರಾಜ್‍ಕುಮಾರ್ ಅವರು ತಮ್ಮ ಚಿಕ್ಕ ವಯಸ್ಸಿನಿಂದ 49ನೇ ವರ್ಷದ ತನಕ ಕಲಾ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಅವರು ಕಲಾ ತಪಸ್ವಿ. ಇದರ ಜೊತೆಗೆ ಅವರು ಸಾಮಾಜಿಕ ಸೇವೆಯನ್ನು ಸಹ ಮಾಡಿಕೊಂಡು ಬಂದಿದ್ದಾರೆ. ತಮಗೆ ಬರುವ ಸಂಭಾವನೆಯನ್ನು ವೃದ್ಧಾಶ್ರಮಗಳಿಗೆ ನೀಡಿದ್ದಾರೆ. ಅವರು ಯುಥ್ ಐಕನ್, ಅವರ ಅಭಿಮಾನಿಗಳು ಪುನೀತ್ ಅವರ ಗುಣಗಳನ್ನು ಅಳವಡಿಸಿಕೊಳ್ಳಬೇಕು, ಪ್ರತಿಯೊಬ್ಬರು ಪುನೀತ್ ರಾಜ್‍ಕುಮಾರ್ ರೀತಿ ಶ್ರದ್ಧೆಯಿಂದ ತಮ್ಮ ತಮ್ಮ ಕೆಲಸವನ್ನು ಮಾಡಿದರೆ ಸಾಧನೆ ಮಾಡಬಹುದು ಎಂದು ತಿಳಿಸಿದರು.
ಮೂವರಿಗೆ ಗೌರವ ಡಾಕ್ಟರೇಟ್ : ಈ ಬಾರಿ ಘಟಿಕೋತ್ಸವದಲ್ಲಿ ಚಿತ್ರರಂಗದಿಂದ ಒಬ್ಬರಿಗೆ, ಜನಪದ ಕ್ಷೇತ್ರದಿಂದ ಒಬ್ಬರಿಗೆ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಒಬ್ಬರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದರು. ವಿಜ್ಞಾನ ವಿಭಾಗದಲ್ಲಿ ಸಾಧನೆ ಮಾಡಿದ ಡಿಆರ್ಡಿಒ ವಿಜ್ಞಾನಿಯಾಗಿದ್ದ ವಿ.ಕೆ. ಅತ್ರೆ ಅವರಿಗೆ ಹಾಗೂ ಜಪಪದ ಕಲೆಯಲ್ಲಿ ಸಾಧನೆ ಮಾಡಿರುವ ಮಹದೇವಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದರು.
ಜೊತೆಗೆ ಈ ಬಾರಿ ಮೈಸೂರು ವಿಶ್ವವಿದ್ಯಾನಿಲಯದಿಂದ 28,580ವಿದ್ಯಾರ್ಥಿಗಳು ಪದವಿಯನ್ನು ಪಡೆಯುತ್ತಿದ್ದಾರೆ. 157 ಜನ ಪಿಹೆಚ್‌ಡಿ ಪಡೆಯುತ್ತಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿ ಸೇರಿ 213 ವಿದ್ಯಾರ್ಥಿಗಳು 376 ಚಿನ್ನದ ಪದಕ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಇನ್ನಾದರೂ ಪಾಠ ಕಲಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ: ಶಾಸಕ ಅಭಯ ಪಾಟೀಲ್