ಮೈಸೂರು: ಆಡಳಿತದಲ್ಲಿ ಹಾಗೂ ವರ್ಗಾವಣೆಯಲ್ಲಿ ಸಿಎಂ ಕುಟುಂಬ ಹಾಗೂ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುವುದು ಸುಳ್ಳು. ಸಿಎಂ ಯಡಿಯೂರಪ್ಪ ರಬ್ಬರ್ ಸ್ಟಾಂಪ್ ಸಿಎಂ ಅಲ್ಲ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಇಂದು ಬಾಬು ಜಗಜೀವನ್ ರಾಮ್ 114ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಆಗಮಿಸಿದ ಎಸ್.ಟಿ.ಸೋಮಶೇಖರ್ ಅವರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮದವರ ಜೊತೆ ಮಾತನಾಡಿದರು.
ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಡಮ್ಮಿಯಾಗಿದ್ದಾರೆ. ಇಲ್ಲಿನ ಎಲ್ಲಾ ಆಡಳಿತವನ್ನು ಸಿಎಂ ಪುತ್ರ ವಿಜಯೇಂದ್ರ ನೋಡಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ವಿರೋಧ ಪಕ್ಷದವರು ವಿಜಯೇಂದ್ರ ಹೆಸರು ಹೇಳಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ವಿಜಯೇಂದ್ರ ಮೈಸೂರಿಗೆ ಬಂದರೆ ತಮ್ಮ ಅಸ್ಥಿತ್ವ ಏನಾಗಬಹುದು ಎಂಬ ಭಯದಿಂದ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ 224 ಕ್ಷೇತ್ರಗಳಿಗೂ ಒಂದೇ ರೀತಿ ಅನುದಾನವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಊಟಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಾಗಿ ಕನ್ನಡಿಗರು ಇದ್ದಾರೆ. ಇಲ್ಲಿನ ಅಭ್ಯರ್ಥಿ ಭೋಜರಾಜ್ 15 ರಿಂದ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲ್ಲಿದ್ದಾರೆ ಎಂದರು.
ಮುಖ್ಯಮಂತ್ರಿ ಕುಟುಂಬ ಹಾಗೂ ಪುತ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಹಸ್ತಕ್ಷೇಪ ಎನ್ನುವುದು ವಿರೋಧ ಪಕ್ಷದ ಆರೋಪ ಅಷ್ಟೇ. ವಿಜಯೇಂದ್ರ ಬಿಜೆಪಿಯ ಪಕ್ಷದ ಉಪಾಧ್ಯಕ್ಷ. ಆದರೆ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯಸ್ಥರು. ಅವರು 45 ವರ್ಷ ರಾಜಕಾರಣ ಮಾಡಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಗಳು ಆಗಿದ್ದಾರೆ ಇವರು ರಬ್ಬರ್ ಸ್ಟಾಂಪ್ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಹಿಂದೆ ಮುಖ್ಯಮಂತ್ರಿಗಳು ಆಗಿದ್ದಾಗ ಅವರ ಮಕ್ಕಳು ಕಡ್ಲೆಪುರಿ ತಿನ್ನುತ್ತಾ ಕುಳಿತ್ತಿದ್ದರಾ? ಈ ಬಗ್ಗೆ ನಾವು ಸಹ ಮಾತನಾಡಬೇಕಾಗುತ್ತದೆ. ವಿಜಯೇಂದ್ರ ಆಡಳಿತ, ವರ್ಗಾವಣೆ ಹಾಗೂ ಉಸ್ತುವಾರಿ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದರು.
ಇನ್ನೂ ಸಿಡಿ ವಿಚಾರದಲ್ಲಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಉಸ್ತುವಾರಿ ಸಚಿವರು ಎಸ್ಐಟಿ ತನಿಖೆಯಲ್ಲಿ ಸಮರ್ಥ ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಲು ಅಧಿಕಾರಿಗಳು ಇದ್ದಾರೆ. ಅಲ್ಲಿವರೆಗೆ ಸಮಾಧಾನದಿಂದ ಇರಬೇಕು. ಮೇಟಿ ಪ್ರಕರಣದ ತನಿಖೆ ಏನಾಯ್ತು? ಎಂಬುದನ್ನು ಹೇಳಿ ವಿರೋಧ ಪಕ್ಷದ ಟೀಕೆಗೆ ನಯವಾಗಿ ಟಾಂಗ್ ನೀಡಿದರು.
ಇನ್ನು ಇದೇ ವೇಳೆ ಕೋವಿಡ್ ಲಸಿಕೆ ವಿತರಣೆ ಬಗ್ಗೆ ಮಾಹಿತಿ ಪಡೆದರು. ಮೈಸೂರಿಗೆ 5 ಲಕ್ಷ ಲಸಿಕೆ ಕೇಳಿದ್ದೇವೆ. ಆದರೆ ಕೊಟ್ಟಿದ್ದು ಮಾತ್ರ 8 ಸಾವಿರ ಇದರಿಂದ ಲಸಿಕೆ ಕೊರತೆ ಇದೆ ಎಂದು ಸಚಿವರಿಗೆ ಆರೋಗ್ಯಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ತಕ್ಷಣ ಈ ವಿಚಾರವನ್ನು ದೂರವಾಣಿ ಮೂಲಕ ಆರೋಗ್ಯ ಸಚಿವರ ಗಮನಕ್ಕೆ ತಂದ ಸಚಿವರು, ಮೈಸೂರಿನಲ್ಲಿ ಪ್ರತಿನಿತ್ಯ 260 ಕೋವಿಡ್ ಪ್ರಕರಣಗಳು ಬರುತ್ತಿದ್ದು, 5 ಲಕ್ಷ ಲಸಿಕೆ ಕಳುಹಿಸಿದರೆ ಸಂಪೂರ್ಣ ನಿಯಂತ್ರಣ ಮಾಡಬಹುದು ಎಂದರು. ಕೊನೆ ಪಕ್ಷ 2 ಲಕ್ಷ ಕೋವಿಡ್ ಲಸಿಕೆಯನ್ನು ಕಳುಹಿಸಿ ಎಂದು ಸಚಿವ ಕೆ.ಸುಧಾಕರ್ಗೆ ದೂರವಾಣಿ ಮೂಲಕ ಮನವಿ ಮಾಡಿದರು.